ಪೊಲೀಸ್ ಸೋಗಿನಲ್ಲಿ ಉದ್ಯಮಿಯ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ - ನಗದು ದೋಚಿದ ಖತರ್ನಾಕ್ ಖದೀಮರು
Wednesday, December 6, 2023
ಬೆಂಗಳೂರು: ಪೊಲೀಸ್ ಸೋಗಿನಲ್ಲಿ ಉದ್ಯಮಿಯ ಮನೆಗೆ ನುಗ್ಗಿದ ಖತರ್ನಾಕ್ ಖದೀಮರು ಗುಂಪೊಂದು 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿ ನಡೆದಿದೆ.
ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪೆನಿಯ ಮಾಲಕ ಮನೋಹರ್ ಎಂಬವರ ಮನೆಗೆ ನುಗ್ಗಿ ದರೋಡೆ ಕೃತ್ಯ ನಡೆದಿದೆ. ಡಿ.4ರಂದು ರಾತ್ರಿ 7.30ರ ವೇಳೆಗೆ ಮನೋಹರ್ ಮನೆಯಲ್ಲಿರಲಿಲ್ಲ. ಅವರ ಪತ್ನಿ ಸುಜಾತಾ ಹಾಗೂ ಪುತ್ರ ರೂಪೇಶ್ ಮಾತ್ರ ಇದ್ದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದಲ್ಲಿ ಐದಾರು ಮಂದಿ ಅಪರಿಚಿತರು ಮನೆಗೆ ಬಂದಿದ್ದಾರೆ.
ಮನೆಯೊಳಗೆ ನುಗ್ಗಿದ ಆರೋಪಿಗಳು, ತಕ್ಷಣ ಮಾರಕಾಯುಧಗಳನ್ನ ತೋರಿಸಿ ಬೆದರಿಸಿದ್ದಾರೆ. ಬಳಿಕ ರೂಪೇಶ್ ರಿಗೆ ಹಲ್ಲೆಗೈದು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಮನೆ ಸಿಸಿ ಕ್ಯಾಮೆರಾದ ಡಿವಿಆರ್ ಕೂಡಾ ಹೊತ್ತೊಯ್ದಿದ್ದಾರೆ. ರೂಪೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.