ಬೋಲ್ಡ್ ನಟಿ ಉರ್ಫಿ ಜಾವೇದ್ ಇನ್ ಸ್ಟಾಗ್ರಾಮ್ ಖಾತೆ ಸ್ಥಗಿತ
Sunday, December 3, 2023
ಮುಂಬೈ: ಬಾಲಿವುಡ್ ನಟಿ, ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿರುವ ಉರ್ಫಿ ಜಾವೇದ್ ಅರವ ಇನ್ಸ್ಟಾಗ್ರಾಮ್ ಖಾತೆ ಇದೀಗ ಅಮಾನತಾಗಿದೆ. ಸ್ವತಃ ಇನ್ಸ್ಟಾಗ್ರಾಮ್ ಟೀಮ್ ಅವರ ಅಕೌಂಟ್ ಅನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸಲು ನಟಿಗೆ 180 ದಿನಗಳ ಕಾಲಾವಕಾಶವನ್ನು ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಉರ್ಫಿ ಜಾವೇದ್ ತಮ್ಮ ಇತರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಮೂಲಕ ಅನುಯಾಯಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ತಮ್ಮ ವಿಭಿನ್ನ ಶೈಲಿಯ ಉಡುಗೆಗಳಿಂದ ಸೆನ್ಸೇಷನ್ ಆಗಿರುವ ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಅಸಾಂಪ್ರದಾಯಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದರು. ಒಂದಲ್ಲ ಒಂದು ವಿಚಾರಗಳಿಂದ, ವಿವಾದಗಳಿಂದ ಈಕೆ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಉಡುಗೆ-ತೊಡುಗೆಗಳಿಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ನಟಿ, ವ್ಯಾಪಕ ಟೀಕೆಗಳಿಗಳೂ ತುತ್ತಾಗಿದ್ದರು. ಇದೀಗ ಇನ್ಸ್ಟಾಗ್ರಾಮ್ ನಟಿಯ ಅಧಿಕೃತ ಖಾತೆಯನ್ನು ಸ್ಥಗಿತಗೊಳಿಸುವ ಮೂಲಕ ಆಕೆಗೆ ಶಾಕ್ ನೀಡಿದೆ.
ಸಾಮಾನ್ಯವಾಗಿ ನಗ್ನತೆ, ದ್ವೇಷಪೂರಿತ ಹೇಳಿಕೆಗಳು ಅಥವಾ ಬಳಕೆದಾರರ ವರದಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಇನ್ಸ್ಟಾಗ್ರಾಮ್ ಈ ರೀತಿಯ ಕ್ರಮ ಕೈಗೊಳ್ಳುತ್ತದೆ. ಆದರೆ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಖಾತೆ ಅಮಾನತುಗೊಳಿಸಿರುವ ಕ್ರಮದ ಹಿಂದಿರುವ ಬಲವಾದ ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.