-->
ಮೂಡುಬಿದಿರೆ: ಸಂಗೀತ ಲೋಕದ ಬಾನ್ಸುರಿ, ವಯೋಲಿನ್, ಸ್ವರದಿಗ್ಗಜರಿಗೆ ‘ವಿರಾಸತ್ ಪ್ರಶಸ್ತಿ' ಗೌರವ Virasath

ಮೂಡುಬಿದಿರೆ: ಸಂಗೀತ ಲೋಕದ ಬಾನ್ಸುರಿ, ವಯೋಲಿನ್, ಸ್ವರದಿಗ್ಗಜರಿಗೆ ‘ವಿರಾಸತ್ ಪ್ರಶಸ್ತಿ' ಗೌರವ Virasath




ಮೂಡುಬಿದಿರೆ: ಸಂಗೀತ ಲೋಕದ ದಿಗ್ಗಜರುಗಳಾದ ವಯೋಲಿನ್ ವಾದಕ ಮೈಸೂರು ಮಂಜುನಾಥ, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ ಭಾನುವಾರ ‘ಆಳ್ವಾಸ್ ವಿರಾಸತ್-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ವೈಭವದ ವೇದಿಕೆಯಲ್ಲಿ ಈ ಮೂವರು ಸಾಧಕರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿಯೊಂದಿಗೆ 1 ಲಕ್ಷ ಮೊತ್ತದ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪನ್ನೀರು ಸಿಂಪಡಿಸಿ, ತಿಲಕ ಹಚ್ಚಿ, ಪುಷ್ಪಾರ್ಚನೆ ಹಾಗೂ ಆರತಿ ಮಾಡಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು. ಬಳಿಕ ಆಳ್ವಾಸ್ ಸಾಂಸ್ಕೃತಿಕ ತಂಡವು 'ಸ್ವರ ಗಾನದ ಆರತಿ' ಗಾನಸುಧೆ ಹರಿಸಿತು.

ಬಳಿಕ ವಿನಮ್ರತೆಯಿಂದ ಮಾತನಾಡಿದ ಮೈಸೂರು ಮಂಜುನಾಥ ಅವರು, 'ನನ್ನ ಲೋಕದ ಸಮಸ್ತ ಸಂಭ್ರಮ ಮೂಡುಬಿದಿರೆಗೆ ಆಳ್ವರು ತಂದಿದ್ದಾರೆ ಎಂದು ದೇವೇಂದ್ರನೇ ನಾಚುವ ಹಾಗೆ ವಿರಾಸತ್ ಭಾಸವಾಗುತ್ತಿದೆ. ಅವರು ಕೇವಲ ವೈಭವದ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ. ಮೂಡುಬಿದಿರೆ ಎಂಬ ಸಾಮಾನ್ಯ ಊರನ್ನು ವಿಶ್ವ ಭೂಪಟಕ್ಕೆ ಸೇರಿಸಿದ್ದಾರೆ ಎಂದು ಬಣ್ಣಿಸಿದರು‌.

ಕಲೆಗೆ ಗೌರವ  ಹಾಗೂ ವೈಭವವನ್ನು ತರಲು ಜಗತ್ತಿಗೆ ಇಂದು ಮೂಡುಬಿದಿರೆ ಮಾಪಕವಾಗಿದೆ. ಇಲ್ಲಿ ಪಾಲ್ಗೊಳ್ಳಲು ಬಯಸಿದ ಕಲಾವಿದರ ಸಂಖ್ಯೆ ಬಹು ದೊಡ್ಡದಿದೆ. ಇಲ್ಲಿ ಇಲ್ಲದಿರುವುದು ಏನಿದೆ ಎಂದು ಭಾವುಕರಾದರು.

ಕಲೆಯ ಮೂಲ ಉದ್ದೇಶವೇ ಸೌಂದರ್ಯ. ಅದನ್ನು ಅರಿತು ಆಸ್ವಾದಿಸುವುದು. ಅದನ್ನು ಮೋಹನ್ ಆಳ್ವರು ಮಾಡುತ್ತಿದ್ದಾರೆ. ಇಲ್ಲಿ ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಆಳ್ವರು ಸಾಂಸ್ಕೃತಿಕ ರಾಯಭಾರಿ.  ವಿರಾಸತ್ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಗೂ ಮಿಗಿಲಾದುದು ಎಂದು ವಿನಮ್ರತೆ ವ್ಯಕ್ತ ಪಡಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ, ಮೋಹನ್ ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲವಿದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀಗೂ ಮಿಗಿಲು ಎಂದು ಬಣ್ಣಿಸಿದರು.

ಡಾ.ಎಂ.ಮೋಹನ ಆಳ್ವ ಮಾತನಾಡಿ, ವಿರಾಸತ್ ಕೇವಲ ಮನೋರಂಜನಾ ಕಾರ್ಯಕ್ರಮವಲ್ಲ, ದೇಶದ ಕಲೆಯನ್ನು ಗೌರವಿಸುವ ಹಬ್ಬ. ನಾಡಿನಲ್ಲಿ ಕಲೆಯನ್ನು ಗೌರವಿಸುವ ಸಂಘಟಕರ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗದ ಅವಶ್ಯಕತೆಯಿದೆ. ಇಲ್ಲಿ ಎಲ್ಲಿಯೂ ಭ್ರಷ್ಟತೆ ಸೋಕಬಾರದು. ಕೃಷಿಕರು, ಯೋಧರು, ಕಲಾವಿದರನ್ನು ಗೌರವಿಸುವ ಆಳ್ವಾಸ್, ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ 7 ಮೇಳಗಳನ್ನು ಈ ಬಾರಿ ಸಂಘಟಿಸಲಾಗಿದೆ. ಇಂದು ನಾನು ನಮ್ಮ ಮನೆಯ ಶ್ರೇಷ್ಠ ಕಲಾವಿದರನ್ನು ಗೌರವಿಸುತ್ತಿದ್ದೇವೆ ಎಂದು ಧನ್ಯತೆ ವ್ಯಕ್ತಪಡಿಸಿದರು.

ಮೂಡುಬಿದಿರೆ ಜೈನಮಠದ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ.ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.

Ads on article

Advertise in articles 1

advertising articles 2

Advertise under the article