ಮಾಲಕನ 12.46ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಬಾಲಕ ಪೊಲೀಸ್
ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮಾಲಕನ ಬಳಿಯಿದ್ದ 12.46ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಬಿಸ್ಕೆಟ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಅಪ್ರಾಪ್ತ ಬಾಲಕನನ್ನು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಬಾಲಕ ಚಿನ್ನದ ಬಿಸ್ಕೆಟ್ ಗಳೊಂದಿಗೆ ಜ.25ರಂದು ಬೆಂಗಳೂರು ಬಿಟ್ಟು ಪರಾರಿಯಾಗಲು ಸಂಚು ರೂಪಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಾಲಕ ತನ್ನ ಪಾದರಕ್ಷೆಯಲ್ಲಿ ಬಿಸ್ಕೆಟ್ ಗಳನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.
ಸಿಐಎಸ್‌ಎಫ್ ಸಬ್ ಇನ್‌ಸ್ಪೆಕ್ಟರ್ ದೀಪಕ್ ತನ್ವರ್ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕ ರಾಜಸ್ಥಾನ ಮೂಲದವನಾಗಿದ್ದು, ಜನವರಿ 25 ರಂದು ಇಂಡಿಗೋ ವಿಮಾನದ (6ಇ 586) ಮೂಲಕ ಅಹಮದಾಬಾದ್‌ಗೆ ಪರಾರಿಯಾಗಲು ಯೋಜನೆ ರೂಪಿಸಿದ್ದನು. ಮುಂಜಾನೆ 1.15ರ ಸುಮಾರಿಗೆ ಭದ್ರತಾ ತಪಾಸಣೆ ವೇಳೆ ಡೋರ್ ಪ್ರೇಮ್ ಮೆಟಲ್ ಡಿಟೆಕ್ಟರ್ ಅಲಾರಾಂ ಹೊಡೆದಿದೆ. ಆದ್ದರಿಂದ ಬಾಲಕನನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಈ ವೇಳೆ ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಳಿಯಿಂದ ಎರಡು ಚಿನ್ನದ ಬಿಸ್ಕೆಟ್‌ಗಳನ್ನು ಕದ್ದೊಯ್ದಿರುವುದಾಗಿ ಬಾಲಕ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.