ಬಿಹಾರದ ಕೂಲಿ ಕಾರ್ಮಿಕನಿಗೆ ಬಂತು ಬರೋಬ್ಬರಿ 1.29 ಕೋಟಿ ರೂ. ವಿದ್ಯುತ್ ಬಿಲ್!
Friday, January 19, 2024
ಮುಜಾಫರ್‌ಪುರ (ಬಿಹಾರ) : ಇಲ್ಲಿನ ವಿದ್ಯುತ್ ಇಲಾಖೆ ನೀಡಿದ ವಿದ್ಯುತ್ ಬಿಲ್ ಗೆ ಕೂಲಿ ಕಾರ್ಮಿಕನೊಬ್ಬ ಬೆಚ್ಚಿ ಬಿದ್ದಿದ್ದಾರೆ. ಪ್ರತಿ ತಿಂಗಳಿನಂತೆ ಮನೆಗೆ ವಿದ್ಯುತ್ ಬಿಲ್ ಬಂದಿದೆ ಎಂದು ನೋಡಿದಾಗ ಅದರಲ್ಲಿದ್ದ ಮೊತ್ತ ಕಂಡು ಆತ ಹೌಹಾರಿದ್ದಾರೆ. ಬಿಲ್ ಮೊತ್ತ ಎಷ್ಟು ಗೊತ್ತೇ ಬರೋಬ್ಬರಿ 1 ಕೋಟಿ 29 ಲಕ್ಷ ರೂಪಾಯಿ.
ವಿಶುಂಪುರ ಚಂದ್ ಪ್ರದೇಶದ ನಿವಾಸಿ ಜಮೀರ್ ಅನ್ಸಾರಿ ಎಂಬುವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಸಣ್ಣ ಮನೆಯಲ್ಲಿ ಕುಟುಂಬದೊಂದಿಗೆ ಜೀವಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಕರೆಂಟ್ ಬಿಲ್ ನೀಡಿದ್ದಾರೆ. ಅದರಲ್ಲಿ 1 ಕೋಟಿ 29 ಲಕ್ಷ 846 ರೂಪಾಯಿ ಕಟ್ಟಬೇಕು ಎಂದು ನಮೂದಿಸಲಾಗಿದೆ. ಇದನ್ನು ಕಂಡು ಬೆಚ್ಚಿದ ಅನ್ಸಾರಿ, ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವಿದ್ಯುತ್ ಬಿಲ್ ಬಗ್ಗೆ ಜಮೀರ್ ಅನ್ಸಾರಿ ಗ್ರಾಹಕರ ವೇದಿಕೆಗೂ ದೂರು ನೀಡಿದ್ದಾರೆ. ಗ್ರಾಹಕರ ವೇದಿಕೆಯ ಅಧ್ಯಕ್ಷ ಅಜಯ್ ಕುಮಾರ್ ಪಾಂಡೆ ಈ ಬಗ್ಗೆ ತನಿಖೆ ನಡೆಸಲು ವಿದ್ಯುತ್ ಇಲಾಖೆಯ ಪೂರ್ವ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರವಣ್ ಕುಮಾರ್ ಠಾಕೂರ್ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಪರಿಶೀಲಿಸಿದಾಗ ಬಿಲ್ ತಪ್ಪಾಗಿ ಬಂದಿದೆ ಎಂದು ತಿಳಿದುಬಂದಿದೆ.
ಭಾರೀ ವಿದ್ಯುತ್ ಬಿಲ್ ಕುರಿತು ಸಹಾಯಕ ಇಲೆಕ್ಟಿಕಲ್ ಇಂಜಿನಿಯರ್ ಹಾಗೂ ಜೆಇಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿದ್ದು, ನಂತರ 1 ಕೋಟಿ 29 ಲಕ್ಷ 846 ರೂ.ಗಳ ಬಿಲ್ಲಿನ ಬದಲಾಗಿ, 33 ಸಾವಿರದ 378 ರೂಪಾಯಿ ಇರುವ ಮತ್ತೊಂದು ಬಿಲ್ ಅನ್ನು ಜಮೀರ್ ಅವರಿಗೆ ನೀಡಲಾಗಿದೆ.
ಇತ್ತೀಚೆಗೆ ಜಮೀರ್ ಅವರ ಮನೆಯಲ್ಲಿದ್ದ ಸಾಮಾನ್ಯ ಮೀಟರ್ ತೆಗೆದು ಬಳಿಕ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಡಿಸೆಂಬರ್ 2022 ರಿಂದ ಫೆಬ್ರವರಿ 2023ರವರೆಗೆ 42 ಯೂನಿಟ್‌ಗಳಷ್ಟು ಖರ್ಚು ಮಾಡಲಾಗಿದೆ ಎಂದು ಗ್ರಾಹಕ ಜಮೀರ್ ಹೇಳುತ್ತಾರೆ. ಆದರೆ, ಮಾರ್ಚ್‌ನಿಂದ ಜೂನ್‌ವರೆಗೆ 331 ಯೂನಿಟ್‌ಗಳ ಬಳಕೆ ಮಾಡಲಾಗಿದೆ ಎಂದು ಸಿಬ್ಬಂದಿ ಬಿಲ್ ನೀಡಿದ್ದಾರೆ. ಜುಲೈನಲ್ಲಿ 327 ಯೂನಿಟ್, ಆಗಸ್ಟ್‌ನಲ್ಲಿ 64 ಮತ್ತು ಸೆಪ್ಟೆಂಬರ್‌ನಲ್ಲಿ 67 ಯೂನಿಟ್ ವಿದ್ಯುತ್ ಬಳಕೆ ಮಾಡಿದ ಬಗ್ಗೆ ತೋರಿಸಲಾಗಿದೆ.
ಹೊಸ ಸ್ಮಾರ್ಟ್ ಮೀಟರ್‌ನಲ್ಲಿ ಡಿಸೆಂಬರ್ ತಿಂಗಳಲ್ಲಿ 36,45,488 ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ತೋರಿಸಲಾಗಿದೆ. ಇದಕ್ಕಾಗಿ 1 ಕೋಟಿ 29 ಲಕ್ಷ 846 ರೂ. ಬಿಲ್ ನೀಡಲಾಗಿದೆ. ಆದರೆ, ನಮ್ಮ ಮನೆಯಲ್ಲಿ ಒಂದೇ ಬಲ್ಫ್ ಉರಿಸಲಾಗುತ್ತದೆ. ಬೇಸಿಗೆಯಲ್ಲಿ ತುಸು ಹೆಚ್ಚು ಬಳಕೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಹಕ ಜಮೀರ್ ಅನ್ಸಾರಿ.
ಪೂರ್ವ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರವಣ್ ಕುಮಾರ್ ಠಾಕೂರ್ ಅವರು ಈ ಬಗ್ಗೆ ತನಿಖೆಗೆ ಸೂಚಿಸಿದ್ದಲ್ಲದೇ, ಸ್ಮಾರ್ಟ್ ಮೀಟರ್ ಅಳವಡಿಸಿ ಏಜೆನ್ಸಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯಕ್ಕೆ ಹಿಂದಿನ ಬಾಕಿ ಸೇರಿದಂತೆ 33,378 ರೂ.ಗಳ ಬಿಲ್ ಅನ್ನು ಗ್ರಾಹಕರು ಪಾವತಿಸಲು ಬಿಲ್ ನೀಡಲಾಗಿದೆ. ಸಂಪೂರ್ಣ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.