ವಿಮಾನದಲ್ಲಿ ಫಜೀತಿ- 1 ಗಂಟೆ ಟಾಯ್ಲೆಟ್ ನಲ್ಲಿ ಪ್ರಯಾಣ!
ನವದೆಹಲಿ: ವಿಮಾನದಲ್ಲಿ ಶೌಚಾಲಯಕ್ಕೆ ತೆರಳಿದ ವೇಳೆ ಶೌಚಾಲಯದ ಬಾಗಿಲು ಲಾಕ್ ಆಗಿ ಪ್ರಯಾಣಿಕರೊಬ್ಬರು 1 ಗಂಟೆ ಕಾಲ ಶೌಚಾಲಯದಲ್ಲೇ ಇದ್ದು ತಮ್ಮ ಪ್ರಯಾಣ ಮುಗಿಸಿದ ಘಟನೆ ನಡೆದಿದೆ.
ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ಮಂಗಳವಾರ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆಂದು ತೆರಳಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಶೌಚಾಲಯದ ಬಾಗಿಲು ಹೊರಗಿನಿಂದ ಲಾಕ್ ಆಗಿಬಿಟ್ಟಿದೆ.
ಇನ್ನು ಶೌಚಾಲಯ ಲಾಕ್ ಆದ ಹಿನ್ನೆಲೆಯಲ್ಲಿ ವಿಮಾನ ಬೆಂಗಳೂರಿಗೆ ಬರುವವರೆಗೂ ಆ ಪ್ರಯಾಣಿಕ ಶೌಚಾಲಯದಲ್ಲೇ 1 ಗಂಟೆಗಳ ಕಾಲ ಪ್ರಯಾಣಿಸಿದ್ದಾರೆ. ಶೌಚಾಲಯದಲ್ಲಿ ಸಿಲುಕಿರುವಾಗ ವಿಮಾನ ಸಿಬ್ಬಂದಿಯು, ‘ಗಾಬರಿ ಆಗಬೇಡಿ. ಶೀಘ್ರ ಬಾಗಿಲ ಲಾಕ್ ಓಪನ್ ಮಾಡಿ ನಿಮ್ಮನ್ನು ಹೊರತರಲಾಗುವುದು’ ಎಂದು ಬಿಳಿ ಕಾಗದದಲ್ಲಿ ಬರೆದು ಬಾಗಿಲ ಸಂದಿ ಮೂಲಕ ಪ್ರಯಾಣಿಕನಿಗೆ ಕಳಿಸಿದ್ದರು.
ವಿಮಾನ ಬೆಂಗಳೂರಿನಲ್ಲಿ ಇಳಿದ ಕೂಡಲೇ ಎಂಜಿನಿಯರ್ ಶೌಚಾಲಯದ ಬಾಗಿಲು ತೆರೆದ ಬಳಿಕವಷ್ಟೇ ಪ್ರಯಾಣಿಕ ಹೊರಬಂದಿದ್ದಾನೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಘಟನೆ ಬಳಿಕ ಶೌಚಾಲಯದಲ್ಲಿ ಸಿಲುಕಿದ ಪ್ರಯಾಣಿಕನ ಬಳಿ ಕ್ಷಮೆಯಾಚಿಸಲಾಗಿದ್ದು, ಆತನ ಟಿಕೆಟ್ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಸ್ಪೈಸ್‌ಜೆಟ್ ಸಂಸ್ಥೆ ತಿಳಿಸಿದೆ.