ಮನೆ ಕ್ಲೀನ್ ಮಾಡುವಾಗ ಮಹಿಳೆಗೆ ಸಿಕ್ಕಿತು 2 ವರ್ಷ ಹಳೆಯ ಲಾಟರಿ ಟಿಕೆಟ್ : ಅದೇ ಟಿಕೆಟ್ ಗೆ ಬಂದಿತ್ತು 91.61 ಲಕ್ಷ ಬಹುಮಾನ
Wednesday, January 3, 2024
ಬರ್ಲಿನ್: ಕೆಲವರು ಅದೃಷ್ಟವನ್ನು ಜೀವನ ಪೂರ್ತಿ ಕಾದು ಕಾದು ಸುಸ್ತಾಗಿರ್ತಾರೆ. ಆದರೆ ಅದೃಷ್ಟವೆಂಬುದು ಇದ್ದರೆ ಅದು ಹೇಗಾದರೂ ಹುಡುಕಿಕೊಂಡು ಬರುತ್ತದೆ. ಇಂತಹ ಅದೃಷ್ಟವೊಂದು ಜರ್ಮನಿಯ ಮಹಿಳೆಯೊಬ್ಬರ ಜೀವನದಲ್ಲಿ ನಡೆದಿದೆ.
ಈ ಮಹಿಳೆಗೆ ಲಾಟರಿ ಹುಚ್ಚು. ಹಲವಾರು ವರ್ಷಗಳಿಂದ ಇವರು ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಅದರಂತೆ 2021ರ ಫೆಬ್ರವರಿಯಲ್ಲೂ ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ, ಆ ಬಳಿಕ ಲಾಟರಿಯನ್ನು ಮನೆಯಲ್ಲಿ ಯಾವುದೋ ಮೂಲೆಯಲ್ಲಿ ಇಟ್ಟು ಮರೆತೇ ಹೋಗಿದ್ದರು. ಮೊನ್ನೆ ಡಿಸೆಂಬರ್ 25ರಂದು ಕ್ರಿಸ್‌ಮಸ್ ಸಂಭ್ರಮಾಚರಣೆ ಮುಗಿದ ಎರಡು ದಿನಗಳ ಬಳಿಕ ಇಡೀ ಮನೆಯನ್ನು ಸ್ವಚ್ಛ ಮಾಡುತ್ತಿದ್ದಾಗ ಮಹಿಳೆಗೆ ಲಾಟರಿ ಟಿಕೆಟ್ ಕಣ್ಣಿಗೆ ಬಿದ್ದಿದೆ.
ಆದರೆ ಎರಡು ವರ್ಷಗಳ ಹಿಂದೆ ಖರೀದಿಸಿರುವ ಲಾಟರಿ ಟಿಕೆಟಲ್ಲವೇ ಎಂದು ನೆನಪಿಸಿಕೊಂಡ ಮಹಿಳೆ, ಲಕ್ಕಿ ಡ್ರಾ ಯಾರಿಗೆ ಒಲಿದಿತ್ತು ಎಂದು ಚೆಕ್ ಮಾಡಿದ್ದಾರೆ. ಆದರೆ ಮಹಿಳೆಗೆ ಶಾಕ್ ಕಾದಿತ್ತು. ಯಾಕಂದ್ರೆ ಸೂಪರ್ ಸಿಕ್ಸ್ ಹಂತದಲ್ಲಿ ಮಹಿಳೆ ಖರೀದಿಸಿದ್ದ ಲಾಟರಿಗೇ ಬಂಪರ್ ಬಹುಮಾನ ಬಂದಿತ್ತು. ಈ ವಿಚಾರ ಮಹಿಳೆಗೆ ಗೊತ್ತಿಲ್ಲದ ಕಾರಣ ಲಾಟರಿ ನಡೆಸುವ ಸಂಸ್ಥೆಯ ಬಳಿಯಲ್ಲೇ ಹಣ ಉಳಿದಿತ್ತು.
2 ವರ್ಷಗಳ ಹಿಂದಿನ ಲಾಟರಿಗೆ ಈಗ ಹಣ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ಮಹಿಳೆಗೆ ಇತ್ತು. 110,000 ಡಾಲರ್ ಮೌಲ್ಯದ ಈ ಲಕ್ಕಿ ಲಾಟರಿ ಬಹುಮಾನ ಭಾರತದ ರೂಪಾಯಿಗಳಲ್ಲಿ 91,61,449 ರೂ. ಆಗುತ್ತದೆ. ಮಹಿಳೆ ಯಾವುದೇ ಕಾರಣಕ್ಕೂ ತಡ ಮಾಡದೆ ತಕ್ಷಣ ಲಾಟರಿ ಸಂಸ್ಥೆಯನ್ನು ಸಂಪರ್ಕಿಸಿದರು. ಲಾಟರಿ ಸಂಸ್ಥೆ ಕೂಡಾ ಮಹಿಳೆಯ ಆಶಯಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಲಾಟರಿ ಟಿಕೆಟ್ ಪರಿಶೀಲನೆ ನಡೆಸಿ ಮಹಿಳೆಗೆ ಸೇರಬೇಕಾದ ಹಣವನ್ನು ಆಕೆಯ ಖಾತೆಗೆ ರವಾನಿಸಿದ್ದಾರೆ. ಈ ಹಣದಲ್ಲಿ ಮಹಿಳೆ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದಾರೆ.