-->
ಡಿ2ಎಂ ಎಂಬ ವಿನೂತನ ತಂತ್ರಜ್ಞಾನ - ಸಿಮ್, ಇಂಟರ್ನೆಟ್ ಇಲ್ಲದೆಯೇ ಮೊಬೈಲ್ ಮೂಲಕ ಟಿವಿ ನೋಡಲು ಸಾಧ್ಯ

ಡಿ2ಎಂ ಎಂಬ ವಿನೂತನ ತಂತ್ರಜ್ಞಾನ - ಸಿಮ್, ಇಂಟರ್ನೆಟ್ ಇಲ್ಲದೆಯೇ ಮೊಬೈಲ್ ಮೂಲಕ ಟಿವಿ ನೋಡಲು ಸಾಧ್ಯ



ನವದೆಹಲಿ: ಡಿಟಿಎಚ್‌ ತಂತ್ರಜ್ಞಾನಕ್ಕೆ ಸಡ್ಡು ಹೊಡೆಯುವಂತೆ ವಿಶ್ವದಲ್ಲೇ ಪ್ರಥಮ ಬಾರಿಗೆ ಎನ್ನಲಾದ ಡೈರೆಕ್ಟ್‌ ಟು ಮೊಬೈಲ್‌ (ಡಿ2ಎಂ) ತಂತ್ರಜ್ಞಾನವೊಂದು ಜಾರಿಗೆ ಬಂದಿದೆ. ಬೆಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ಶೀಘ್ರವೇ ಡಿ2ಎಂ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಂಪೂರ್ಣವಾಗಿ ದೇಶೀಯ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಿರುವ ಇದು ವಿನೂತನ ತಂತ್ರಜ್ಞಾನ. ಇದರ ವೈಶಿಷ್ಟ್ಯವೆಂದರೆ, ಸಿಮ್‌ಕಾರ್ಡ್‌ ಅಥವಾ ಇಂಟರ್ನೆಟ್‌ ಸಂಪರ್ಕ ಇಲ್ಲದೆಯೇ ಬಳಕೆದಾರರು ತಮ್ಮ ಮೊಬೈಲ್‌ಗಳಲ್ಲಿ ಟಿವಿ ಚಾನೆಲ್‌ಗಳ ನೇರಪ್ರಸಾರ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಡಿಜಿಟಲ್‌ ಯುಗದಲ್ಲಿ ಕ್ರಾಂತಿಗೆ ಕಾರಣವಾಗುವುದರೊಂದಿಗೆ, ರಾಷ್ಟ್ರೀಯ ಭದ್ರತೆಗೆ ಅಪಾಯ, ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲೂ ಈ ತಂತ್ರಜ್ಞಾನ ಅತ್ಯಂತ ಪರಿಣಾಮಕಾರಿಯಾದ ಕಾರಣ ಎಲ್ಲರ ಗಮನ ಇದೀಗ ಡಿ2ಎಂನತ್ತ ನೆಟ್ಟಿದೆ.

ಡಿ2ಎಂ ಮೇಲಿನ ಬ್ರಾಡ್‌ಕಾಸ್ಟ್‌ ಮತ್ತು ಬ್ರಾಡ್‌ಬ್ಯಾಂಡ್‌ ಎರಡೂ ತಂತ್ರಜ್ಞಾನಗಳ ಮಿಶ್ರಣವಿದ್ದಂತೆ. ಇಲ್ಲಿ ಯಾವುದೇ ಕಾರ್ಯಕ್ರಮವನ್ನು ದೂರದರ್ಶನದ ಪ್ರಾದೇಶಿಕ ಪ್ರಸಾರ ಕೇಂದ್ರಗಳ ಮೂಲಕ ವಿಶೇಷ ಸ್ಪೆಕ್ಟ್ರಂ ಬಳಸಿ ರವಾನಿಸಲಾಗುವುದು. ಇದನ್ನು ಸ್ವೀಕರಿಸುವ ತಂತ್ರಜ್ಞಾನ ಹೊಂದಿದ ಮೊಬೈಲ್‌ ಗ್ರಾಹಕರು ತಮ್ಮ ಮೊಬೈಲ್‌ಗಳಲ್ಲೇ ಸಿಮ್‌ಕಾರ್ಡ್‌ ಅಥವಾ ಇಂಟರ್ನೆಟ್‌ ಇಲ್ಲದೇ ಕಾರ್ಯಕ್ರಮ ವೀಕ್ಷಿಸಬಹುದು.

‘ಐಐಟಿ ಕಾನ್ಪುರ’ ಮತ್ತು ‘ಸಂಖ್ಯಾ ಲ್ಯಾಬ್‌’ ವಿಶ್ವದಲ್ಲೇ ಮೊದಲನೆಯದ್ದು ಎನ್ನಲಾದ ಈ ಡಿ2ಎಂ ತಂತ್ರಜ್ಞಾನವನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿವೆ. ಇದನ್ನು ಕಳೆದ ವರ್ಷ ಬೆಂಗಳೂರು ಸೇರಿ ಆಯ್ದ ನಗರಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಅದನ್ನು ಬೆಂಗಳೂರು ಸೇರಿದಂತೆ 19 ನಗರಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ತರಲು ನಿರ್ಧರಿಸಲಾಗಿದೆ.


Ads on article

Advertise in articles 1

advertising articles 2

Advertise under the article