ಉಡುಪಿ: ಅಪ್ರಾಪ್ತೆಯನ್ನು ಬೆದರಿಸಿ ಪದೇಪದೇ ಅತ್ಯಾಚಾರ - ಆರೋಪಿಗೆ 20ವರ್ಷ ಕಠಿಣ ಸಜೆ
Friday, January 26, 2024
ಉಡುಪಿ: ಖಾಸಗಿ ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೊಕ್ಸೊ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಕಾಪು ತಾಲೂಕಿನ ಮಜೂರು ನಿವಾಸಿ ಸಂಶುದ್ದೀನ್(24) ಶಿಕ್ಷೆಗೊಳಗಾದ ಆರೋಪಿ. ಸಂಶುದ್ದೀನ್ ರಿಕ್ಷಾದಲ್ಲಿಯೇ ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆತ ತನ್ನ ಮೊಬೈಲ್‌ನಲ್ಲಿ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ ತೆಗೆದಿದ್ದನು. ಬಳಿಕ ಈ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ. ಬಳಿಕ ತನ್ನ ಒಂದು ಬಂದಲ್ಲಿ ಫೋಟೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದಾನೆ.
ಅದರಂತೆ ನೊಂದ ಬಾಲಕಿ ಆತ ಹೇಳಿದ್ದನ್ನು ಒಪ್ಪಿದ್ದಾಳೆ. ಆ ಬಳಿಕ ಆಕೆಯನ್ನು ಕಾಪುವಿನ ಲಾಡ್ಜ್‌ಗೆ ಕರೆದೊಯ್ದು ತನ್ನ ಪತ್ನಿ ಎಂದು ಸುಳ್ಳು ಮಾಹಿತಿ ನೀಡಿ ರೂಮ್ ಪಡೆದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಅದೇ ಸಮಯ ಆರೋಪಿ ಬಾಲಕಿಯ ಅರೆನಗ್ನತೆಯಲ್ಲಿದ್ದ ವಿಡಿಯೋವನ್ನು ಮಾಡಿದ್ದಾನೆ. ಬಳಿಕ ಅದನ್ನು ಡಿಲೀಟ್ ಮಾಡಬೇಕಾದರೆ ಹಣ ನೀಡಬೇಕೆಂದು ಬೆದರಿಕೆ ಹಾಕಿ ಆಕೆಯಿಂದ ಹಣ ಪಡೆದುಕೊಂಡಿದ್ದನು. ಅದೇ ರೀತಿ ಮತ್ತೆ ಬೆದರಿಸಿ ಕಾಪುವಿನ ರೆಸಾರ್ಟ್‌ಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಆರೋಪಿ ಮತ್ತೆ ಬಾಲಕಿಯನ್ನು ತನ್ನೊಂದಿಗೆ ಬರಬೇಕು, ದೈಹಿಕ ಸಂಪರ್ಕ ನಡೆಸಬೇಕೆಂದು ಪದೇಪದೇ ಒತ್ತಾಯಿಸಿದ್ದಾನೆ. ಆಕೆ ಅದನ್ನು ನಿರಾಕರಿಸಿದಕ್ಕೆ ಆಕೆಯ ಅರೆನಗ್ನ ವೀಡಿಯೊಗಳನ್ನು ಆಕೆಯ ತಾಯಿಯ ಮೊಬೈಲ್‌ಗೆ ಕಳುಹಿಸಿ ತಾನು ಕೇಳಿದಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಬಾಲಕಿಯ ತಾಯಿ ನೀಡಿದ ದೂರಿನಂತೆ ಆಗಿನ ಕಾಪು ಪೊಲೀಸ್ ಠಾಣಾ ಎಸ್ಸೈ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಆಗಿನ ವೃತ್ತ ನಿರೀಕ್ಷಕ ಪ್ರಕಾಶ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಒಟ್ಟು 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಮೊಬೈಲ್‌ಗಳಲ್ಲಿದ್ದ ಭಾವಚಿತ್ರದ ಬಗ್ಗೆ ಅಭಿಯೋಜನೆ ಸಲ್ಲಿಸಿರುವ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಎಸಗಿರುವ ಆರೋಪಿಗೆ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಬಾಲಕಿಯ ಅತ್ಯಾಚಾರಕ್ಕೆ 20ವರ್ಷಗಳ ಕಠಿಣ ಸಜೆ 20ಸಾವಿರ ರೂ. ದಂಡ, ಬೆದರಿಕೆಯೊಡ್ಡಿದಕ್ಕೆ ಒಂದು ವರ್ಷ ಸಜೆ ಒಂದು ಸಾವಿರ ರೂ. ದಂಡ, ಲೈಂಗಿಕ ಹಲ್ಲೆಗಾಗಿ ಒಂದು ವರ್ಷ ಸಜೆ ಮತ್ತು ಒಂದು ಸಾವಿರ ರೂ. ದಂಡ, ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕೆ 5ವರ್ಷ ಸಜೆ, 5000ರೂ. ದಂಡ, ವಿಡಿಯೋವನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದಕ್ಕೆ 5000ರೂ. ದಂಡ, ಐಟಿ ಕಾಯಿದೆಯಡಿ 2 ವರ್ಷ ಸಜೆ 2000ರೂ. ದಂಡ. ದಂಡ ತೆರಲು ತಪ್ಪಿದಲಿ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದ್ದಾರೆ.