ಈತನ ಅದೃಷ್ಟವೋ ಅದೃಷ್ಟ: ತಿಂದದ್ದು 279 ರೂ. ಬಿರಿಯಾನಿ - ಗಿಫ್ಟ್ ಬಂದದ್ದು ಏಳು ಲಕ್ಷ ರೂ. ಕಾರು
Thursday, January 4, 2024
ತಿರುಪತಿ: ಲಕ್ ಅನ್ನೋದು ಯಾವಾಗ? ಯಾರಿಗೆ? ಯಾವಾಗ ಹುಡುಕಿಕೊಂಡು ಬರುತ್ತದೆ ಎಂದು ಅಂದಾಜಿಸಲಾಗದು. ಇದೆಲ್ಲವೂ ಕಾಲದ ಮಹಿಮೆಯಷ್ಟೇ. ಅಂಥದ್ದೇ ಅದೃಷ್ಟವೊಂದು ಆಂಧ್ರಪ್ರದೇಶದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ.
ಕಾರು ಖರೀದಿಸಿಸಬೇಕೆಂಬುದು ಅನೇಕರ ಜೀವನದ ಗುರಿಯಾಗಿರುತ್ತದೆ. ಅದಕ್ಕಾಗಿ ಹಗಲಿರುಳು ಶ್ರಮಿಸಿದರೂ ಜೀವನದಲ್ಲಿನ ಕೆಲವು ಬದ್ಧತೆಗಳಿಂದ ಬಹುತೇಕರಿಗೆ ಕಾರು ಖರೀದಿಸಲು ಸಾಧ್ಯವಾಗುವುದೇ ಇಲ್ಲ. ಮಧ್ಯಮ ವರ್ಗದ ಜನರಿಗಂತೂ ಕಾರು ಕೈಗೆಟುಕದ ಹುಳಿದ್ರಾಕ್ಷಿಯೆಂದೇ ಹೇಳಬಹುದು. ಆದರೆ ಆಂಧ್ರಪ್ರದೇಶದ ತಿರುಪತಿ ಮೂಲದ ರಾಹುಲ್ ಎಂಬವರು 279 ರೂ. ಮೌಲ್ಯದ ಬಿರಿಯಾನಿ ತಿಂದು ಬಹುಮಾನವಾಗಿ 7 ಲಕ್ಷ ರೂ. ಮೌಲ್ಯದ ಕಾರನ್ನು ಬಹುಮಾನವಾಗಿ ಗೆದ್ದಿದ್ದಾರೆ. ಈ ಅಚ್ಚರಿಯನ್ನು ನೀವು ನಂಬಲೇಬೇಕು. ಇದೇ ಸತ್ಯ.
ತಿರುಪತಿಯ ರೆಸ್ಟೋರೆಂಟೊಂದು ಇಂಥಹ ಬಂಪರ್ ಗಿಫ್ಟ್ ನೀಡಿದೆ. ತಿರುಪತಿಯಲ್ಲಿ ರೋಬೋ ಎಂಬ ಹೆಸರಿನ ಹೋಟೆಲ್ ಇದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೊಸ ನೋಟಿಫಿಕೇಶನ್ ಒಂದನ್ನು ಹೊರಡಿಸಿತ್ತು. ನಮ್ಮ ಹೋಟೆಲ್ನಲ್ಲಿ ಬಿರಿಯಾನಿ ತಿನ್ನುವವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ಗೆದ್ದವರಿಗೆ ಕಾರನ್ನು ಗಿಫ್ಟ್ ಆಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಅಂದಿನಿಂದ ಸಾಕಷ್ಟು ಮಂದಿ ಪ್ರತಿದಿನ ಹೋಟೆಲ್ ಬಂದು ಬಿರಿಯಾನಿ ಸೇವಿಸುತ್ತಿದ್ದರು.
ಹೋಟೆಲ್ ಮೂಲಗಳ ಪ್ರಕಾರ ಘೋಷಣೆ ಮಾಡಿದಾಗಿನಿಂದ ಸುಮಾರು 23 ಸಾವಿರ ಮಂದಿ 279 ರೂ. ಕೊಟ್ಟು ಟೋಕನ್ ಪಡೆದು ಬಿರಿಯಾನಿ ಸೇವಿಸಿದ್ದಾರೆ. ಹೊಸ ವರ್ಷದ ಹಿಂದಿನ ದಿನ ಲಾಟರಿಯಲ್ಲಿ ಆಯ್ಕೆಯಾದ ವ್ಯಕ್ತಿಗೆ 7 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ರೆಸ್ಟೋರೆಂಟ್ ತಿಳಿಸಿತ್ತು. ಅದೇ ರೀತಿ ಹೊಸ ವರ್ಷದ ಹಿಂದಿನ ದಿನ ರೆಸ್ಟೊರೆಂಟ್ನಲ್ಲಿ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು. ಕಾರ್ಯನಿರ್ವಾಹಕ ಭರತ್ ಕುಮಾರ್ ಮತ್ತು ಅವರ ಪತ್ನಿ ನೀಲಿಮಾ ಅವರು 23 ಸಾವಿರ ಜನರಲ್ಲಿ ಒಬ್ಬ ವ್ಯಕ್ತಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು.
ತಿರುಪತಿ ಮೂಲದ ರಾಹುಲ್ ಎಂಬುವರ ಟೋಕನ್ ಬಹುಮಾನಕ್ಕೆ ಆಯ್ಕೆಯಾಯಿತು. ಈ ಮಾಹಿತಿಯನ್ನು ರಾಹುಲ್ ಅವರಿಗೆ ತಿಳಿಸಿ, ಅವರನ್ನು ಬರಮಾಡಿಕೊಂಡು 7 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಹಸ್ತಾಂತರಿಸಲಾಗಿದೆ. ಬಿರಿಯಾನಿ ತಿಂದಿದ್ದಕ್ಕೆ ಇಷ್ಟೊಂದು ದೊಡ್ಡ ಉಡುಗೊರೆ ಸಿಗುತ್ತದೆ ಅಂತ ಕನಸು-ಮನಸ್ಸಲ್ಲೂ ನೆನಸಿರಲಿಲ್ಲ ಎನ್ನುತ್ತಾರೆ ರಾಹುಲ್. ಬಿರಿಯಾನಿಗೆ ಕಾರನ್ನು ಉಡುಗೊರೆಯಾಗಿ ನೀಡುವ ವಿನೂತನ ಯೋಜನೆಯಿಂದಾಗಿ ನಮ್ಮ ರೆಸ್ಟೋರೆಂಟ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರೆಸ್ಟೋರೆಂಟ್ ಆಡಳಿತ ಮಂಡಳಿ ತಿಳಿಸಿದೆ.