ಅಯೋಧ್ಯೆ ಕೇಸ್ ಗೆ ಮರುಜೀವ- 31 ವರ್ಷ ಹಳೆ ಪ್ರಕರಣದಲ್ಲಿ ಓರ್ವ ಬಂಧನ- ವಿವಾದ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿರುವಂತೆಯೇ ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದೆ ನಡೆದಿದ್ದ ಅಯೋಧ್ಯೆ ಸಂಬಂಧಿತ ಗಲಭೆ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿ ರುವುದು ವಿವಾದಕ್ಕೆ ಕಾರಣವಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಹಿಂದೂ ಕಾರ್ಯಕರ್ತರ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಹಿಂದೂ ಸಂಘಟನೆಗಳು, ಬಿಜೆಪಿ ಆರೋಪಿಸಿವೆ. ಅದನ್ನು ಒಪ್ಪದ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗಳು ಹಳೇ ಪ್ರಕರಣಗಳ ಆರೋಪಿಗಳ ಪತ್ತೆ ಭಾಗವಾಗಿ ಈ ಬಂಧನ ನಡೆದಿದ್ದು, ಇದೊಂದು ಸಾಮಾನ್ಯ ಪ್ರಕ್ರಿಯೆ, ಇದರಲ್ಲಿ ವಿಶೇಷ ಇಲ್ಲ ಎಂದು ಹೇಳಿದೆ.
ದೇಶದ ಇತರ ಸ್ಥಳಗಳಂತೆ ಹುಬ್ಬಳ್ಳಿ ಯಲ್ಲಿಯೂ ಅಯೋಧ್ಯೆ ಘಟನೆ ಪ್ರತಿಧ್ವನಿಸಿತ್ತು. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದಲ್ಲಿ ಐವರು ವಿಚಾರಣೆ ಎದುರಿಸಿ ಕೇಸ್ ಖುಲಾಸೆ ಮಾಡಿಕೊಂಡಿದ್ದರು. 2006ರಲ್ಲಿ ಪ್ರಕರಣವನ್ನು ಕೋರ್ಟ್ ದೀರ್ಘಾವಧಿ ಪ್ರಕರಣ ಎಂದು ಪರಿಗಣಿಸಿತ್ತು. ಉಳಿದ 8 ಜನರಲ್ಲಿ ಐವರು ಮೃತಪಟ್ಟಿದ್ದು, ಇನ್ನುಳಿದ ಮೂವರ ವಿರುದ್ದ ಪೊಲೀಸರು ಈಗ ಕ್ರಮಕ್ಕೆ ಮುಂದಾಗಿದ್ದಾರೆ.
ಡಿ. 18ರಂದು ಒಬ್ಬರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನೊಬ್ಬ ವ್ಯಕ್ತಿ ಅನಾರೋಗ್ಯ ಪೀಡಿತನಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಣೆಯ ಅನಂತರ ಹಾಜರಾಗುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಡಿ. 29ರಂದು ಶ್ರೀಕಾಂತ ಪೂಜಾರನನ್ನು ಬಂಧಿಸಲಾಗಿದ್ದು ಅವರಿಗೆ ಜಾಮೀನು ದೊರೆಯದೆ ನ್ಯಾಯಾಂಗ ವಶದಲ್ಲಿ ಇರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ವಿಪಕ್ಷ ನಾಯಕ ಅಶೋಕ್ 30 ವರ್ಷದ ಹಳೆಯ ಕೇಸ್ ಗಳನ್ನು ಕೆದಕಿ ಹಿಂದೂಗಳನ್ನು ರಾಜ್ಯ ಸರಕಾರ ಗುರಿ ಮಾಡುತ್ತಿದೆ. ರಾಮ ಮಂದಿರ ಆಗಬೇಕೆಂಬ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ನನ್ನನ್ನು ಬಂಧಿಸುವಿರ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಗೃಹ ಸಚಿವ ಪರಮೇಶ್ವರ್ ಹಳೆಯ ಪ್ರಕರಣ ಇತ್ಯರ್ಥಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಉದ್ದೇಶಪೂರ್ವಕವಾಗಿ ಯಾರನ್ನೂ ಗುರಿ ಮಾಡಿಲ್ಲ. ಅವುಗಳನ್ನು ಇತ್ಯರ್ಥಪಡಿಸುವಾಗ ಆಕಸ್ಮಿಕವಾಗಿ ಈ ಪ್ರಕರಣ ಬಂದಿದೆ. ಬಿಜೆಪಿ ಯವರು ಇದರ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.