ಮೈ ಕೊರೆಯುವ ಚಳಿ..ಈ ಜಿಲ್ಲೆಯಲ್ಲಿ ಜ. 6 ವರೆಗೆ ಶಾಲೆಗಳಿಗೆ ರಜೆ
ಉತ್ತರ ಪ್ರದೇಶ: ಮೈಕೊರೆಯುವ ಚಳಿ, ವಿಪರೀತವಾದ ಶೀತ ಮಾರುತಗಳು ಮತ್ತು ದಟ್ಟವಾದ ಮಂಜು ಆವರಿಸುತ್ತಿರುವ ಹಿನ್ನೆಲೆ ಉತ್ತರಪ್ರದೇಶ ರಾಜ್ಯದ ಲಕ್ನೋ ಜಿಲ್ಲಾಡಳಿತವು ಅಲ್ಲಿಯ ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಿದೆ.
"ಶೀತ ಮಾರುತಗಳ ಉಲ್ಬಣ ಆಗುತ್ತಿರುವುದರಿಂದ ಹಾಗೂ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳವಾರದಿಂದ ಜನವರಿ 6ರ ವರೆಗೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸದಿರಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರಲಿದೆ" ಎಂದು ಲಕ್ನೋ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ ರಾಮ್ ಪ್ರವೇಶ್ ಅವರು ಆದೇಶ ಹೊರಡಿಸಿದ್ದಾರೆ.
"ಶೀತ ಮಾರುತಗಳ ಪರಿಣಾಮ ಸದ್ಯ ಲಕ್ನೋ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ತಂಪಾದ ಮತ್ತು ಮಂಜಿನ ವಾತಾವರಣವಿದೆ. ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಗಳು ಬರಬಹುದು. ಈ ಹಿನ್ನೆಲೆ 2024 ರ ಜನವರಿ 6ರ ವರೆಗೆ ಪೂರ್ವ ಪ್ರಾಥಮಿಕದಿಂದ 8ನೇ ತರಗತಿಯವರೆಗೆ ಜಿಲ್ಲಾಧಿಕಾರಿಗಳು ನೀಡಿದ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ. 9 ರಿಂದ 12 ನೇ ತರಗತಿಯವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ. ಆದೇಶ ಪಾಲಿಸದ ಶಾಲೆಗಳ ವಿರುದ್ಧ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ರಾಮ್ ಪ್ರವೇಶ್ ಹೇಳಿದ್ದಾರೆ.
ತೀವ್ರ ಚಳಿಯಿಂದಾಗಿ ಬಾರಾಬಂಕಿ ಸೀತಾಪುರ್ನ ಕೆಲವು ಶಾಲೆಗಳಿಗೆ ಈಗಾಗಲೇ ರಜೆ ನೀಡಲಾಗಿದೆ. ಕೆಲವು ಶಾಲೆಗಳ ಕಾರ್ಯ ಸಮಯವನ್ನು ಬದಲಾಯಿಸಲಾಗಿದೆ. ವಾರಣಾಸಿ ಜಿಲ್ಲಾಡಳಿತ ಸಹ ಜನವರಿ 6 ತಾರೀಖು ವರೆಗೆ ರಜೆ ಘೋಷಿಸಿದೆ. ಚಳಿಯ ಪ್ರಮಾಣ ತಗ್ಗಿದ ಬಳಿಕ ಮತ್ತೆ ತೆರೆದುಕೊಳ್ಳಲಿವೆ. ಪೋಷಕರು ಸಹ ಕೆಲವು ದಿನಗಳ ಮಟ್ಟಿಗೆ ಶಾಲೆಗಳಿಗೆ ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಶಿಕ್ಷಣಾಧಿಕಾರಿಗಳು ಎಲ್ಲ ಶಾಲೆಗಳ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.
"ಜನವರಿ 5 ರಿಂದ 11ರ ವರೆಗೆ ರಾತ್ರಿ ವೇಳೆ ತಾಪಮಾನ ಕುಸಿಯುವ ನಿರೀಕ್ಷೆಯಿದೆ. ಇದು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಶೀತ ವಾತಾವರಣ ಕಾರಣವಾಗಬಹುದು. ದಿನದ ಉಷ್ಣತೆಯು ಸಾಮಾನ್ಯಕ್ಕಿಂತಲೂ ಕಡಿಮೆ ಇರಲಿದೆ. ವಿಶೇಷವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರದ ಉತ್ತರ ಭಾಗಗಳು ಮತ್ತು ಉತ್ತರ ಪ್ರದೇಶದ ದಕ್ಷಿಣ ಭಾಗಗಳಲ್ಲಿ ಶೀತದ ತೀವ್ರತೆ ಹೆಚ್ಚಾಗಲಿದೆ" ಎಂದು ಭಾರತೀಯ ಹವಾಮಾನ ಇಲಾಖೆಯ ಡಿಜಿ ಡಾ. ಮೃತ್ಯುಂಜಯ್ ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.