ಬೆಳ್ತಂಗಡಿ: ತಮ್ಮನೊಂದಿಗೆ ಜಗಳವಾಗಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ - ಪುತ್ರನ ಸಾವಿನಿಂದ ಮನನೊಂದು ತಂದೆಯೂ ನೇಣಿಗೆ ಶರಣು
Tuesday, January 16, 2024
ಮಂಗಳೂರು: ತಮ್ಮನೊಂದಿಗೆ ಜಗಳವಾಗಿ ಮನನೊಂದ ಎಂಟನೇ ತರಗತಿ ವಿದ್ಯಾರ್ಥಿಯೋರ್ವನು ನೇಣಿಗೆ ಶರಣಾದ ಹದಿಮೂರೇ ದಿನಕ್ಕೆ ಆತನ ತಂದೆಯೂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿಯ ಉಜಿರೆ ಗ್ರಾಮದ ಪೆರ್ಲದಲ್ಲಿ ನಡೆದಿದೆ.
ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಯೋಗೀಶ್ ಪೂಜಾರಿ ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ (14) 8ನೇ ತರಗತಿಯ ಬಾಲಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಜ.4ರಂದು ಯಕ್ಷಿತ್ ತನ್ನ ಆರು ವರ್ಷದ ತಮ್ಮನೊಂದಿಗೆ ಗಲಾಟೆ ಮಾಡಿದ್ದ. ಈ ವೇಳೆ ತಮ್ಮ ಯಕ್ಷಿತ್ ಹೊಟ್ಟೆ ಮೇಲೆ ಕಚ್ಚಿ ಗಾಯಗೊಳಿಸಿದ್ದ. ಇದರಿಂದ ಮನನೊಂದ ಯಕ್ಷಿತ್ ತಮ್ಮನ ಮುಂಭಾಗ ಮನೆಯಲ್ಲಿಯೇ ತಾಯಿಯ ಸೀರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಈತನ ಉತ್ತರಕ್ರಿಯೆ ಜನವರಿ 14ರಂದು ನಡೆದಿತ್ತು. ಪುತ್ರನ ಉತ್ತರಕ್ರಿಯೆ ನಡೆದ ಎರಡೇ ದಿನಕ್ಕೆ ಆತನ ತಂದೆ ಯೋಗೀಶ್ ಪೂಜಾರಿಯೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.