ಶಿಕ್ಷೆಯ ನೆಪದಲ್ಲಿ ಮೆಣಸಿನ ಹೊಗೆ ಹಾಕಿ ಹಿಂಸೆ- ಅನಾಥಾಶ್ರಮದಲ್ಲಿ ಹೆಣಕ್ಕಳನ್ನು ತಲೆಕೆಳಗೆ ನೇತುಹಾಕಿ ಚಿತ್ರಹಿಂಸೆ!
ಇಂದೋರ್: ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇಂದೋರ್ ನಗರದಲ್ಲಿರುವ 'ವಾತ್ಸಲ್ಯಪುರಂ' ಎಂಬ ಚಿಕ್ಕ ಹೆಣ್ಣು ಮಕ್ಕಳ ಅನಾಥಾಶ್ರಮವನ್ನು ಜೈನ್ ವೆಲ್‌ಫೇರ್ ಎಂಬ ಎನ್‌ಜಿಒ ನಡೆಸುತ್ತಿದೆ. ಬಡ ಹೆಣ್ಮಕ್ಕಳನ್ನು ವರ್ಷಕ್ಕೆ ಕೇವಲ 5 ರು. ಶುಲ್ಕ ಪಡೆದು ಕೊಂಡು ನೋಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಮಕ್ಕಳಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ಜೈನ್ ಸಂಸ್ಥೆ ತಳ್ಳಿಹಾಕಿದೆ.
ಕೊಳಕು ಬಟ್ಟೆ ಧರಿಸಿದ್ದ ಕಾರಣಕ್ಕೆ 4 ವರ್ಷದ ಬಾಲಕಿಗೆ ಥಳಿಸಿ, ಬಾತ್‌ರೂಮಲ್ಲಿ ಕೂಡಿ ಹಾಕಲಾಗಿತ್ತು. ಆಕೆಗೆ 2 ದಿನ ಊಟ ನೀಡಿಲ್ಲ. ಮೆಣಸಿನ ಹೊಗೆ ಹಾಕುವುದು, ತಲೆಕೆಳಗಾಗಿ ನೇತುಹಾಕುವ ಶಿಕ್ಷೆ ನೀಡಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.