ಬಂಟ್ವಾಳ: ಅಪಘಾತಕ್ಕೆ ನಾಟಕ ಕಲಾವಿದ ಬಲಿ
Monday, January 1, 2024
ಬಂಟ್ವಾಳ: ರಂಗಭೂಮಿ ಕಲಾವಿದನೊಬ್ಬನು ನಾಟಕದಲ್ಲಿ ಪಾತ್ರ ನಿರ್ವಹಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟ ದಾರುಣ ಘಟನೆಯೊಂದು ಬಂಟ್ವಾಳ ತಾಲೂಕಿನ ವಗ್ಗದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು ನಿವಾಸಿ ಗೌತಮ್ (26) ಮೃತಪಟ್ಟ ಕಲಾವಿದ. ಗೌತಮ್ ಮೂಡುಬಿದಿರೆಯ 'ಪಿಂಗಾರ ಕಲಾವಿದೆರ್' ತಂಡದಲ್ಲಿ ನಾಟಕ ಕಲಾವಿದರಾಗಿದ್ದರು. ಶನಿವಾರ ಬೆಳುವಾಯಿಯಲ್ಲಿ ನಾಟಕವಿತ್ತು. ಅಲ್ಲಿ ಪಾತ್ರ ನಿರ್ವಹಿಸಿ ನಸುಕಿನ ವೇಳೆ 3 ಗಂಟೆಯ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮನೆಯ ಸಮೀಪದಲ್ಲೇ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಗೌತಮ್ ತಲೆಗೆ ತೀವ್ರ ಏಟು ಬಿದ್ದು ರಸ್ತೆಗೆ ಬಿದ್ದಿದ್ದರು.
ಬೆಳಗ್ಗೆ ರಸ್ತೆಯಲ್ಲಿ ಹೋಗುತ್ತಿದ್ದವರು ಇದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ತಲೆಗೆ ಗಂಭೀರ ಗಾಯಗೊಂಡ ಭಾಗದಲ್ಲಿ ರಕ್ತಸ್ರಾವ ಆಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ಗೌತಮ್ ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಉತ್ತಮ ನಾಟಕ ಕಲಾವಿದರಾಗಿದ್ದ ಅವರು ಹಲವಾರು ಸಂಘ ಸಂಸ್ಥೆಗಳ ನಾಟಕಗಳಲ್ಲಿ ಪಾತ್ರ ವಹಿಸಿದ್ದರು.