ರಾಮಮಂದಿರದ ಪ್ರಸಾದವೆಂದು ಸಿಹಿತಿಂಡಿ ಮಾರಾಟ: ಅಮೆಜಾನ್ ಸಂಸ್ಥೆಗೆ ಕೇಂದ್ರ ಸರಕಾರ ಶಾಕ್
Saturday, January 20, 2024
ನವದೆಹಲಿ: ರಾಮಮಂದಿರ, ಅಯೋಧ್ಯೆ, ಪ್ರಾಣ ಪ್ರತಿಷ್ಠಾ, ಅಮೆಜಾನ್, ರಾಮ ಮಂದಿರ ಪ್ರಸಾದ, ಶ್ರೀರಾಮ,ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ ಎಂದು ಹೇಳಿ ಸಿಹಿ ತಿನಿಸು ಮಾರಾಟ ಮಾಡುತ್ತಿದ್ದ ಇ- ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿಗೊಳಿಸಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನೀಡಿರುವ ದೂರಿನನ್ವಯ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನಿಯಂತ್ರಕ ಮಂಡಳಿ ಸಿಸಿಪಿಎ ಅಮೆಜಾನ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಜ.22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನೀಡುವ ಪ್ರಸಾದ ಎಂಬ ಸೋಗಿನಲ್ಲಿ ಅಮೆಜಾನ್ ಸ್ವೀಟ್ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ದೂರು ನೀಡಿದೆ.
ಈ ಹಿನ್ನೆಲೆ ಅಮೇಜಾನ್‌ಗೆ ನೋಟಿಸ್ ನೀಡಿರುವ ಸಿಸಿಪಿಎ ಏಳು ದಿನಗಳೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ. ಅದೇ ರೀತಿ ಉತ್ತರ ನೀಡಲು ವಿಫಲವಾದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಸಹ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದೆ.
ಅಮೆಜಾನ್‌ನಲ್ಲಿ ವಿವಿಧ ಸಿಹಿತಿಂಡಿಗಳು/ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಸಿಹಿ ತಿನಿಸುಗಳಿಗೆ “ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ” ಎಂದು ಲೇಬಲ್ ಹಾಕಿ ಆನ್‌ಲೈನ್‌ನಲ್ಲಿ ಆಹಾರ ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಗ್ರಾಹಕರನ್ನು ಮೂರ್ಖರನ್ನಾಗಿಸುವಂತಹ ಕೃತ್ಯವಾಗಿದೆ ಎಂದು CCPA ಖಂಡಿಸಿದೆ.