ಹಿಂದೂ ಯುವತಿಗೆ ಡೈರಿ ಮಿಲ್ಕ್ ನೀಡಿ ಪ್ರೊಪೋಸ್: ಅನ್ಯಕೋಮಿನ ಯುವಕರಿಬ್ಬರಿಗೆ ಹಿಗ್ಗಾಮುಗ್ಗಾ ಥಳಿತ
Wednesday, January 10, 2024
ಚಿಕ್ಕಮಗಳೂರು: ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕರಿಬ್ಬರ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೂಡಿಗೆರೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆಯ ವೀಡಿಯೋ ದೃಶ್ಯಾವಳಿ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದಿದ್ದ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆ.
ಅನ್ಯಕೋಮಿನ ಯುವಕರಿಬ್ಬರು ಯುವತಿಗೆ ಡೈರಿ ಮಿಲ್ಕ್ ಚಾಕೆಟ್ ನೀಡಿ ಪ್ರಪೋಸ್ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಈ ವಿಚಾರ ತಿಳಿದ ಹಿಂದೂ ಸಂಘಟನೆ ಯುವಕರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಎರಡು ಕೋಮುಗಳ ಮಂದಿ ಸೇರಿದ್ದಾರೆ. ಈ ವೇಳೆ ಒಂದಷ್ಟು ಹೊತ್ತು ಉದ್ರಿಕ್ತ ವಾತಾವರಣ ಉಂಟಾಗಿತ್ತು. ಹಲ್ಲೆಗೀಡಾದ ಮುನೀರ್ ಮತ್ತು ಸಮೀರ್ ಎಂಬಿಬ್ಬರು ಯುವಕರು ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.