ಪುತ್ತೂರು: ಪ್ರೀತಿಸಿದಾಕೆಯನ್ನು ಮತ್ತೊಬ್ಬ ವಿವಾಹವಾದ ಸಿಟ್ಟು - ವರನ ಬೈಕ್ ಅನ್ನೇ ಸುಟ್ಟ ಪಾಗಲ್ ಪ್ರೇಮಿ
Saturday, January 13, 2024
ಪುತ್ತೂರು: ಪ್ರೀತಿಸಿದಾಕೆಯನ್ನು ಮತ್ತೊಬ್ಬ ವಿವಾಹವಾದನೆಂಬ ಸಿಟ್ಟಿಗೆ ವರನ ಬೈಕನ್ನೇ ಪಾಗಲ್ ಪ್ರೇಮಿಯೊಬ್ಬ ಸುಟ್ಟು ಹಾಕಿರುವ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ನಿನ್ನಿಕಲ್ಲು ಪಾದಾಳ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಈ ವಿಚಾರ ಬಯಲಿಗೆ ಬಂದಿದೆ.
ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳ ನಿವಾಸಿ ಸಂದೀಪ್ ಎಂಬ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈತ ತನ್ನದೇ ಗ್ರಾಮದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆಕೆಗೆ ಜನವರಿ 3ರಂದು ಬೇರೊಬ್ಬನೊಂದಿಗೆ ವಿವಾಹವಾಗಿತ್ತು. ಆದ್ದರಿಂದ ಪ್ರೇಯಸಿಯನ್ನು ಮದುವೆಯಾದ ಯುವಕನ ಮೇಲೆ ಆರೋಪಿಗೆ ಸಿಟ್ಟಿತ್ತು. ಯುವತಿ ಜನವರಿ 6ರಂದು ಪತಿಯೊಂದಿಗೆ ತವರಿಗೆ ಬಂದಿದ್ದಳು. ರಾತ್ರಿ ವೇಳೆ ಮನೆಯ ಸಮೀಪ ಇರಿಸಿದ್ದ ವರನ ಬೈಕಿಗೆ ಬೆಂಕಿ ಬಿದ್ದಿತ್ತು. ಬೈಕನ್ನು ಮನೆಯಿಂದ 100 ಮೀ ದೂರಕ್ಕೆ ಒಯ್ದು ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ವರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಆರೋಪಿ ಸಂದೀಪ್ ಈ ಕೃತ್ಯ ಎಸಗಿರುವುದು ಬಯಲಾಗಿದೆ. ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ಯುವಕನ ಮೇಲಿನ ದ್ವೇಷದಿಂದ ಆತನ ಬೈಕ್ ಅನ್ನು ಸುಟ್ಟುಹಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.