ಮಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತನಿಗೆ ಕಾಂಗ್ರೆಸ್ ಅವಧಿಯಲ್ಲಿ ಸಿಕ್ಕಿತು ಪರಿಹಾರ
Wednesday, January 17, 2024
ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ ರಿಕ್ಷಾ ಡ್ರೈವರ್ ಪುರುಷೋತ್ತಮ ಪೂಜಾರಿಯವರಿಗೆ ಒಂದು ವರ್ಷದ ಬಳಿಕ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪರಿಹಾರ ಸಿಕ್ಕಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿಎಂ ಪರಿಹಾರ ನಿಧಿಯಿಂದ 2ಲಕ್ಷ ರೂ. ಪರಿಹಾರದ ಹಣ ಸಿಕ್ಕಿದೆ. ದ.ಕ.ಜಿಲ್ಲಾಧಿಕಾರಿಯವರ ಖಾತೆಗೆ ಜ.1ರಂದು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ಪರಿಹಾರ ಮೊತ್ತದ ಚೆಕ್ ಅನ್ನು ಪುರುಷೋತ್ತಮ ಪೂಜಾರಿಗೆ ನಿನ್ನೆ ವಿತರಣೆ ಮಾಡಲಾಗಿದೆ. ಪರಿಹಾರ ಚೆಕ್ ವಿತರಣೆ ಮಾಡುವ ಉದ್ದೇಶದಿಂದ ಸಿಎಂ ಪರಿಹಾರ ನಿಧಿಯಿಂದ ಸಿಎಂ ಜಂಟಿ ಕಾರ್ಯದರ್ಶಿ ಪಿ. ಗೋಪಾಲ್ ಆದೇಶ ಹೊರಡಿಸಿದ್ದಾರೆ.
2022 ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಉಗ್ರ ಶಾರೀಕ್ ಕುಕ್ಕರ್ ಬಾಂಬ್ ಹಿಡಿದುಕೊಂಡು ಸ್ಪೋಟಿಸಲು ಕೊಂಡೊಯ್ಯುತ್ತಿದ್ದ. ಈ ವೇಳೆ ಕುಕ್ಕರ್ ಬಾಂಬ್ ರಿಕ್ಷಾದಲ್ಲಿಯೇ ಸ್ಪೋಟಗೊಂಡಿತ್ತು. ಪಡೀಲ್ ನಿಂದ ಪಂಪ್ ವೆಲ್ ಕಡೆಗೆ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ನೊಂದಿಗೆ ಬರುತ್ತಿದ್ದಾಗ ಗರೋಡಿ ಬಳಿ ಬಾಂಬ್ ಸ್ಪೋಟಗೊಂಡಿತ್ತು. ಇದರಿಂದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಉಗ್ರ ಶಾರೀಕ್ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಸ ತನಿಖೆಯನ್ನು ಎನ್ ಐ ಎ ಗೆ ಹಸ್ತಾಂತರಿಸಲಾಗಿತ್ತು. ಎನ್ ಐ ಎ ತನಿಖೆಯಲ್ಲಿ ಈ ಕುಕ್ಕರ್ ಬಾಂಬ್ ನ್ನು ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸಲು ಕೊಂಡೊಯ್ಯಲಾಗಿತ್ತು ಎಂದು ತಿಳಿಸಿತ್ತು. ಘಟನೆಯಾದ ತಕ್ಷಣ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಭೇಟಿಯಾಗಿ ಸರಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಇವರಿಗೆ ಯಾವ ಪರಿಹಾರವೂ ದೊರೆತಿರಲಿಲ್ಲ.
ಆದರೆ ಶಾಸಕ ವೇದವ್ಯಾಸ ಕಾಮತ್ ಅವರು ವೈಯಕ್ತಿಕ ನೆಲೆಯಿಂದ ಪುರುಷೋತ್ತಮ ಪೂಜಾರಿಯವರಿಗೆ ರಿಕ್ಷಾ ವೊಂದನ್ನು ನೀಡಿದ್ದರು. ಇದರೊಂದಿಗೆ ಗುರು ಬೆಳದಿಂಗಲು ಸಂಸ್ಥೆಯಿಂದ ಅವರ ಮನೆಯನ್ನು ನವೀಕರಣ ಮಾಡಿ ಕೊಡಲಾಗಿದೆ.