ಮಂಗಳೂರು: ರೇಶನ್ ಕಾರ್ಡ್ ದೊರಕದ ಆಕ್ರೋಶ ಸಿದ್ದರಾಮಯ್ಯ, ಡಿಕೆಶಿಯನ್ನು ಅವಾಚ್ಯವಾಗಿ ನಿಂದಿಸಿ ವೀಡಿಯೋ ವೈರಲ್ - ಆರೋಪಿ ಅರೆಸ್ಟ್
Tuesday, January 16, 2024
ಮಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿ ವೀಡಿಯೋ ಹರಿಯಬಿಟ್ಟ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ, ಪ್ರಸ್ತುತ ಕಳೆದ 12 ವರ್ಷಗಳಿಂದ ಸುರತ್ಕಲ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿರುವ ಅನಿಲ್ ಕುಮಾರ್(34) ಬಂಧಿತ ಆರೋಪಿ.
ಆರೋಪಿ ಅನಿಲ್ ಕುಮಾರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾನೆ. ಮೊದಲಿಗೆ ಕನ್ನಡದಲ್ಲಿ ನಿಂದಿಸಿ ಬಳಿಕ ತುಳುವಿನಲ್ಲಿ ಕೆಟ್ಟ ಪದಗಳಿಂದ ಬೈದಿರುವ ದೃಶ್ಯ ವೀಡಿಯೋದಲ್ಲಿತ್ತು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎನ್ಎಸ್ ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸುರತ್ಕಲ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ವೀಡಿಯೋ ಮಾಡಲು ಕಾರಣ: ಆರೋಪಿ ಅನಿಲ್ ಕುಮಾರ್ ತನ್ನ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದ. ಆದರೆ 3 ತಿಂಗಳಿನಿಂದ ಸರ್ವರ್ ಸಮಸ್ಯೆ ಹಾಗೂ ಇತರ ಸಮಸ್ಯೆಗಳಿಂದ ಈತನಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಹತಾಶೆಗೊಂಡ ಆರೋಪಿ ವಿಡಿಯೋ ಮಾಡಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.