ಮಂಗಳೂರು: ಪೊಳಲಿ ದ್ವಾರದ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್ - ಹಲವರಿಗೆ ಗಾಯ
Tuesday, January 2, 2024
ಮಂಗಳೂರು: ನಗರದ ಗುರುಪುರ ಕೈಕಂಬದ ಹತ್ತಿರದ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆಗುರುಳಿ ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಳಲಿ ದ್ವಾರಕ್ಕಿಂತ ನೂರು ಕಿ.ಮೀ. ದೂರದಲ್ಲಿ ಬಸ್ ರಸ್ತೆಗುರುಳಿದೆ. ಶುಭಲಕ್ಷ್ಮಿ ಎಂಬ ಹೆಸರಿನ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಈ ಬಸ್ ಗುರುಪುರ ಕೈಕಂಬದಿಂದ ಬಿ.ಸಿ.ರೋಡ್ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ಸಿನಲ್ಲಿ 40ರಿಂದ 50 ರಷ್ಟು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಬಸ್ ನಲ್ಲಿದ್ದ ಸುಮಾರು 20ರಷ್ಟು ಮಂದಿಗೆ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಅಲ್ಲದೆ ವಾಹನದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಉಂಟಾಗಿದೆ. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದ್ದಾರೆ.