ಖಬರಸ್ಥಾನದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ
Tuesday, January 16, 2024
ಯಾದಗಿರಿ: ಇಲ್ಲಿನ ಸುರಪುರ ನಗರದ ಝಂಡದಕೇರಾ ಸಂತ್ರಸವಾಡಿ ಸಮೀಪದ ಖಬರಸ್ಥಾನದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಅಮಾನವೀಯ ಘಟನೆ ವರದಿಯಾಗಿದೆ.
ಸೋಮವಾರ ಬೆಳಗ್ಗೆ ಕಸ ಆಯುವವರು ದಫನ ಭೂಮಿಯತ್ತ ಹೋಗಿದ್ದಾರೆ. ನವಜಾತ ಶಿಶುವಿನ ಮೃತದೇಹ ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮೃತದೇಹವಿರುವ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಸ್‌ಐ ಶರಣಪ್ಪ ಹವಾಲ್ದಾರ ಹಾಗೂ ಸಿಬ್ಬಂದಿ ಆಗಮಿಸಿ ನವಜಾತ ಶಿಶುವಿನ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಿ, ಆಸ್ಪತ್ರೆಯ ಹಿಂಭಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹ ಎಸೆದು ಹೋಗಿರುವ ಹೆತ್ತವರ ಕುರಿತು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.