ಪುತ್ತೂರು: ಬೈಕ್ - ಟಿಪ್ಪರ್ ನಡುವೆ ಅಪಘಾತ- ಶಿಕ್ಷಕಿ ಮೃತ್ಯು
Monday, January 29, 2024
ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ, ಬೈಕ್ ಸಹಸವಾರೆ ಶಿಕ್ಷಕಿಯೋರ್ವರು ಮೃತಪಟ್ಟ ಘಟನೆ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು ನಡೆದಿದೆ.
ಬೈಕ್ ನ ಹಿಂಬದಿ ಸವಾರೆ ಮಾಣಿ ಖಾಸಗಿ ಶಾಲಾ ಶಿಕ್ಷಕಿ ಅನಿತಾ(35) ಮೃತಪಟ್ಟವರು. ಬೈಕ್ ಸವಾರರಾಗಿದ್ದ ಇಡ್ಕಿದು ಗ್ರಾಮದ ಮಿತ್ತೂರು ಮದಕ ನಿವಾಸಿ ಅನಿತಾ ಅವರ ಪತಿ ಸುರೇಶ್ ಕುಲಾಲ್ ಹಾಗೂ ಜತೆಗಿದ್ದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಶಿಕ್ಷಕಿ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಸೋಮವಾರ ಮಧ್ಯಾಹ್ನ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದು, ಹಿಂತಿರುಗುತ್ತಿದ್ದ ವೇಳೆ ಪೋಳ್ಯದಲ್ಲಿ ವೇಗದಿಂದ ಬಂದ ಟಿಪ್ಪರ್ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಅನಿತಾ ಹಾಗೂ ಮಗು ರಸ್ತೆಗೆಸೆಯಲ್ಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತರುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.