ಮಂಗಳೂರು: ವೆಲ್ಡಿಂಗ್ ಕಾರ್ಯದಲ್ಲಿ ನಿರತರಾಗಿದ್ದಾಗ ಅಗ್ನಿ ಅವಘಡ - ಕಾರ್ಮಿಕ ಸಾವು
Sunday, January 14, 2024
ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕಂಪೆನಿಯೊಂದರಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಟ್ಯಾಂಕ್ ಮೇಲ್ಬಾಗದಿಂದ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ರೊನಾಲ್ಡ್ ಪೌಲ್ (64) ಮೃತಪಟ್ಟ ದುರ್ದೈವಿ.
ಜ.13ರಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಜಾನ್ಸ್ ಪೆಟ್ರೋ ಕೆಮಿಕಲ್ ಪ್ರೈ.ಲಿ. ಕಂಪೆನಿಯಲ್ಲಿ ರೊನಾಲ್ಡ್ ಪೌಲ್ ಸೇರಿದಂತೆ ಆರು ಮಂದಿ ಕಾರ್ಮಿಕರು ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಇತರೆ ಕಾರ್ಮಿಕರು ಮಹಡಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದರು. ರೊನಾಲ್ಡ್ ಪೌಲ್ ಅವರು ಟ್ಯಾಂಕ್ ಮೇಲೆ ನಿಂತು ವೆಲ್ಡಿಂಗ್ ಮಾಡುತ್ತಿದ್ದರು. ಸಂಜೆ 4 ಗಂಟೆ ಸುಮಾರಿಗೆ ಸ್ಥಳದಲ್ಲಿ ಏಕಾಏಕಿ ಅಗ್ನಿಅವಘಡ ಸಂಭವಿಸಿದೆ. ಆಗ ಟ್ಯಾಂಕ್ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದ ರೊನಾಲ್ಡ್ ಪೌಲ್ ಸುಮಾರು 20 ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರಿಗೆ ಹೊಟ್ಟೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರೊನಾಲ್ಡ್ ಪೌಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬೆಂಕಿ ಅವಘಡದಲ್ಲಿ ಇತರ ಕೆಲಸಗಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅವರಾರಿಗೂ ಪ್ರಾಣಾಪಾಯದಂತಹ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.