ನಿನ್ನ ಗಂಡನಿಗೆ ಗಂಡಾಂತರ ಇದೆ.. ಕೊನೆಗೆ ಬುಡಬುಡಿಕೆ ವೇಷಧಾರಿ ಮಾಡಿದ್ದು ಹೀಗೆ...
ಬುಡಬುಡಿಕೆ ವೇಷಧಾರಿ ವ್ಯಕ್ತಿಯೊಬ್ಬ 'ನಿನ್ನ ಗಂಡನಿಗೆ ಗಂಡಾಂತರ ಇದೆ' ಎಂದು ಹೆದರಿಸಿ ಪೂಜೆ ನೆಪದಲ್ಲಿ ಮಹಿಳೆಯ 4 ಗ್ರಾಂ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿಸಿಕೊಂಡು ಬಳಿಕ ಕದ್ದು ಪರಾರಿಯಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಗುಬ್ಬಿಯ ಜನತಾ ಕಾಲೋನಿ ನಿವಾಸಿ ಶಕುಂತಲಾ (25) ಚಿನ್ನದ ಕಿವಿ ಯೋಲೆ ಕಳೆದುಕೊಂಡವರು. ಇವರು ಅಪರಿ ಚಿತ ವ್ಯಕ್ತಿಯ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ದೂರುದಾರೆ ಶಕುಂತಲಾ ಅವರು ಜ.28ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದರು. ಈ ವೇಳೆ ಬುಡುಬುಡಿಕೆ ನುಡಿಸುತ್ತಾ ಅಪರಿಚಿತ ವ್ಯಕ್ತಿ ಯೊಬ್ಬ ಮನೆ ಬಳಿ ಬಂದಿದ್ದಾನೆ. ಈ ವೇಳೆ ಆತ “ನಿನ್ನ ಗಂಡನಿಗೆ ಗಂಡಾಂತರವಿದೆ. ಪೂಜೆ ಮಾಡದಿದ್ದರೆ 9 ದಿನಗಳಲ್ಲಿ ಮರಣ ಹೊಂದುತ್ತಾನೆ' ಎಂದು ಹೆದರಿಸಿದ್ದಾನೆ. ಇದರಿಂದ ಆತಂಕಗೊಂಡ ಶಕುಂತಲಾ, ಪೂಜೆಮಾಡಿಸಲು ಒಪ್ಪಿದ್ದಾರೆ.
ಅದರಂತೆ ಆ ವ್ಯಕ್ತಿಯ ಒಂದು ಮಡಿಕೆ ಪಡೆದು ಅದಕ್ಕೆ ಅಕ್ಕಿ, ಕುಂಕುಮ, ಅರಿಶಿನಹಾಕಿದ್ದಾನೆ. ಬಳಿಕ ಕಿವಿಯೋಲೆ ಬಿಚ್ಚಿಡುವಂತೆ ಸೂಚಿಸಿದ್ದಾನೆ. ಅದರಂತೆ ಶಂಕುತಲಾ ಅವರು ತಮ್ಮ ಕಿವಿ ಯೋಲೆಗಳನ್ನು ಬಿಚ್ಚಿಟ್ಟಿದ್ದಾರೆ. ಬಳಿಕ ಆತ 'ಕಣ್ಣುಮುಚ್ಚಿಕುಳಿತುಕೊಳ್ಳಿ. ಪೂಜೆ ಮಾಡುತ್ತೇನೆ' ಎಂದು ಹೇಳಿದ್ದಾನೆ.ಆತನ ಮಾತಿನಂತೆ ಶಕುಂತಲಾ ಕಣ್ಣು ಮುಚ್ಚಿ ಕುಳಿತಿದ್ದಾರೆ. ಬಳಿಕ ಆತ ಆ ಮಡಿಕೆ ಸುತ್ತ ದಾರಕಟ್ಟಿದ್ದಾನೆ ಹೋಗಿದ್ದಾನೆ. ಸಂಜೆ ಗಂಡ ಮನೆಗೆ ಬಂದ ನಂತರ ಶಕುಂತಲಾ ಅವರು ಮಡಿಕೆಯನ್ನು ತೆರೆದು ನೋಡಿದಾಗ ಆ ಮಡಿಕೆಯಲ್ಲಿ ಚಿನ್ನದ ಓಲೆಗಳು ನಾಪತ್ತೆ ಆಗಿದ್ದವು.