ಮಂಗಳೂರು: ಬಿಜೆಪಿಯಿಂದ ಧರ್ಮಶಾಸ್ತ್ರಕ್ಕೆ ಅಪಚಾರ: ಹಿಂದೂ ಮಹಾಸಭಾ
Thursday, January 18, 2024
ಮಂಗಳೂರು: ಅಪೂರ್ಣಾವಸ್ಥೆಯಲ್ಲಿದ್ದಾಗಲೇ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ಉದ್ಘಾಟನೆ ಮಾಡಿ, ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿರುವುದು ಧರ್ಮಶಾಸ್ತ್ರಕ್ಕೆ ಮಾಡಿದ ಅಪಚಾರವಾಗಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಪ್ರಭು ಶ್ರೀರಾಮಚಂದ್ರನನ್ನು ಚುನಾವಣೆಯ ಸರಕನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಖಂಡಿತಾ ಶ್ರೀರಾಮನ ಶಾಪ ತಟ್ಟುತ್ತದೆ. ಕರ್ನಾಟಕದಲ್ಲಿ ಆದ ಸ್ಥಿತಿಯೇ ಕೇಂದ್ರದಲ್ಲೂ ಆಗಬಹುದು. ರಾಮಜನ್ಮಭೂಮಿಯ ಮೂಲ ವಕಾಲತ್ತುದಾರರು ಹಿಂದೂ ಮಹಾಸಭಾ ಆಗಿದ್ದು, ರಾಮಮಂದಿರದ ಉದ್ಘಾಟನೆಗೆ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡವನ್ನೇ ಆಹ್ವಾನಿಸಿಲ್ಲ. ಇದು ಕೇಂದ್ರ ಸರ್ಕಾರದ ಸ್ವಾರ್ಥ ರಾಜಕಾರಣವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಶ್ರೀರಾಮನ ವಿಚಾರದಲ್ಲಿ ಭಂಡತನ ಮಾಡಿ, ಶಾಸ್ತ್ರಗಳನ್ನು ಅನುಷ್ಠಾನಕ್ಕೆ ತರದೆ ಮಂತ್ರಾಕ್ಷತೆಯನ್ನು ಇಷ್ಟಪ್ರಕಾರ ಮಾಡಿಕೊಂಡು ಕೇವಲ ಬೂಟಾಟಿಕೆಯ ಶಾಸ್ತ್ರ ಮಾಡುತ್ತಿದೆ. ಮೊಘಲ್, ಬ್ರಿಟಿಷ್, ಟಿಪ್ಪು ಕಾಲದಲ್ಲಿ ಶಂಕರಾಚಾರ್ಯರ ಪೀಠದ ಮೇಲೆ ನಿರಂತರ ಆಕ್ರಮಣಗಳಾಗಿದೆ. ಇದೀಗ ಬಿಜೆಪಿಯೂ ಶಂಕರಾಚಾರ್ಯರನ್ನು ಅವಹೇಳನ ಮಾಡುವಂತಹ ಕಾರ್ಯ ಮಾಡುತ್ತಿದೆ. ಶ್ರೀರಾಮನ ವಿಚಾರವನ್ನು ಸಂಭ್ರಮಿಸಬೇಕಾದ ಈ ಕಾಲದಲ್ಲಿ ಅದಕ್ಕೆ ಹೋರಾಟ ಮಾಡಿದವರನ್ನೇ ಬದಿಗೊತ್ತಿರುವುದು ಒಪ್ಪುವಂತಹ ಮಾತಲ್ಲ ಎಂದರು.