Honeymoon ಹೋಗದೆ ಬೀಚ್ ಸ್ವಚ್ಚತೆ- ಉಡುಪಿಯ ದಂಪತಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ
ಉಡುಪಿ: ಮದುವೆಯಾದ ಬಳಿಕ ಹನಿಮೂನ್‌ಗೆ ಹೋಗದೆ ಬೀಚ್ ಸ್ವಚ್ಚತೆ ಮಾಡಿದ ದಂಪತಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಭಾಗಿಯಾಗಲು ಆಹ್ವಾನ ಬಂದಿದೆ.
ಕಳೆದ ಫೆಬ್ರವರಿಯಲ್ಲಿ ಉಡುಪಿಯ ನವಜೋಡಿ ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ್ ಮದುವೆಯಾದ ಬಳಿಕ ಮಾಡಿರುವ ಸಮಾಜಮುಖಿ ಕಾರ್ಯ ಭಾರಿ ಸುದ್ದಿಯಾಗಿತ್ತು. ಈಗ ಇದೇ ಜೋಡಿಗೆ ಕೇಂದ್ರ ಸರ್ಕಾರ ದೆಹಲಿ ಗಣರಾಜ್ಯೋತ್ಸವದಲ್ಲಿ ಹಾಜರಾಗುವಂತೆ ಆಹ್ವಾನ ನೀಡಿದೆ.
ಬೈಂದೂರಿನವರಾದ ಇವರು ಮದುವೆಯಾಗಿ ಕೇವಲ ಒಂದು ವಾರವಷ್ಟೇ ಕಳೆದಿತ್ತು. ಮದುವೆಗೂ ಮುನ್ನ 6 ವರ್ಷಗಳ ಲವ್ ಸ್ಟೋರಿ ಇವರದ್ದು. ಕೊರೊನಾದಿಂದಾಗಿ ಹನಿಮೂನ್‌ಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಿದ್ದರೂ ನೆನಪಿನಲ್ಲಿ ಉಳಿಯುವ ಯಾವುದಾದರೂ ಕೆಲಸ ಮಾಡಲೇ ಬೇಕು ಅಂತ ನಿರ್ಧಾರ ಮಾಡಿದ್ದರು. ಆಗ ಹೊಳೆದಿದ್ದೇ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರ ಬೀಚ್.
ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದ ಉಡುಪಿ ದಂಪತಿ
ಮದುವೆಯಾದ ಹೊಸದರಲ್ಲಿ ಸೋಮೇಶ್ವರ ಬೀಚ್ಗೆ ಹೋದಾಗ ಸಮುದ್ರ ದಡ ಬಹಳ ಮಲೀನವಾಗಿರುವುದು ಇವರ ಗಮನಕ್ಕೆ ಬಂದಿತ್ತು. ಬೀಚ್ನಲ್ಲಿ ಚಪ್ಪಲಿ, ಮದ್ಯದ ಬಾಟಲಿ ಮತ್ತು ಔಷಧಗಳ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಸಮುದ್ರ ದಡ ಕಸದ ರಾಶಿಯಿಂದ ತುಂಬಿಹೋಗಿತ್ತು. ಅನುದೀಪ್ ತಮ್ಮ ಪತ್ನಿ ಮಿನುಷಾ ಅವರಲ್ಲಿ ಸಮುದ್ರ ತೀರ ಸ್ವಚ್ಛಗೊಳಿಸುವ ಪ್ರಸ್ತಾಪವಿಟ್ಟರು.
ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡಾ ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ಕರೆ ಕೊಟ್ಟಿದ್ದರು.
ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಿ. ಮಿನುಷಾ ಫಾರ್ಮಾಸುಟಿಕಲ್ ಕಂಪನಿ ಉದ್ಯೋಗಿ. ಇಬ್ಬರೂ ಪ್ರಕೃತಿಪ್ರಿಯರೇ. ಮಿನುಷಾ ಪತಿಯ ಅಭಿಪ್ರಾಯಕ್ಕೆ ತಕ್ಷಣ ಒಪ್ಪಿಕೊಂಡಿದ್ದರು. ತಮ್ಮ ಪಾಡಿಗೆ ಬೀಚ್ ಶುಚಿಗೊಳಿಸೋಕೆ ಶುರು ಮಾಡಿದ್ದರು. ನಿಧಾನಕ್ಕೆ ಇವರೊಂದಿಗೆ ಸ್ಥಳೀಯ ಉತ್ಸಾಹಿಗಳೂ ಸೇರಿದ್ದರು.
2020ರ ನವೆಂಬರ್ 27ರಿಂದ ಡಿಸೆಂಬರ್ 5ರವರೆಗೆ ಇಡೀ ಸೋಮೇಶ್ವರ ಸಮುದ್ರ ತೀರದಲ್ಲಿರುವ ಕಸವನ್ನೆಲ್ಲ ಸ್ವಚ್ಛಗೊಳಿಸಿದರು. ಸುಮಾರು 6 ಕ್ವಿಂಟಲ್ ಕಸ ಒಟ್ಟುಗೂಡಿಸಿದ್ದರು. ಈ ಸ್ವಚ್ಛತಾ ಕಾರ್ಯ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಯಿತು.
ಇವರ ಕೆಲಸ ಪ್ರಧಾನಿ ಮೋದಿ ಅವರ ಗಮನವನ್ನು ಸೆಳೆದಿತ್ತು. 2020ನೇ ವರ್ಷದ ಕೊನೆಯ 'ಮನ್ ಕೀ ಬಾತ್'ನಲ್ಲಿ ಮೋದಿ ದಂಪತಿಯ ಕಾರ್ಯ ಶ್ಲಾಘಿಸಿದ್ದರು. ಯುವ ಪೀಳಿಗೆಗೆ ದಾರಿದೀಪ ಎಂದು ಹೊಗಳಿದ್ದರು. ಈ ವೇಳೆ ಅನುದೀಪ್ ಹೆಗ್ಡೆ, ವಿನುಷಾ ದಂಪತಿ ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.
ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದ ಉಡುಪಿ ದಂಪತಿ
ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಿದೆ. ಕೇಂದ್ರ ಸರ್ಕಾರ ಇಬ್ಬರಿಗೂ ಆಮಂತ್ರಣ ನೀಡಿದೆ. ಹಾಗಾಗಿ ದೆಹಲಿ ತಲುಪಿದ್ದಾರೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.