ಈ ವರ್ಷ ಪ್ರಪಂಚಕ್ಕೆ ಉತ್ತಮ ದಿನಗಳಿಲ್ಲ: ಜಗತ್ತಿನ ಪ್ರಭಾವಿ ಸಂತರೊಬ್ಬರು, ಇಬ್ಬರು ಪ್ರಧಾನಿಗಳು ಸಾವಿಗೀಡಾಗುವ ಸಾಧ್ಯತೆ
Saturday, January 27, 2024
ಗದಗ: ಈ ವರ್ಷದಲ್ಲಿ ಪ್ರಪಂಚಕ್ಕೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಇಬ್ಬರು ಪ್ರಧಾನಿಗಳು ಸಾವಿಗೀಡಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟಕ, ಅಣುಬಾಂಬ್ ಸ್ಪೋಟದಂತಹ ಸನ್ನಿವೇಶಗಳು ಮತ್ತು ಯುದ್ಧದ ಭೀತಿ ಆವರಿಸಲಿದೆ. ಇದರಿಂದ ಜಗತ್ತೇ ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಭಾರತೀಯರು ದೇವರು, ಧರ್ಮ, ಸತ್ಯ, ನಂಬಿಕೆ ವಿಚಾರದಲ್ಲಿ ಪ್ರಬುದ್ಧರಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ಮಿಸಿ ಸ್ಮರಣೆ ಮಾಡುವುದು ಸಾಮಾನ್ಯವಾಗಿದೆ. ಆ ದೆಸೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಧಾರ್ಮಿಕತೆಯ ಪ್ರತೀಕವಾಗಿದೆ. ಇದರಿಂದ ಧಾರ್ಮಿಕವಾಗಿಯೂ ಒಳ್ಳೆಯ ಸೂಚನೆ ಸಿಕ್ಕಂತಾಗಿದೆ. ರಾಜಕೀಯದಲ್ಲಿ ಧಾರ್ಮಿಕತೆ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ಸಾಮಾನ್ಯವಾಗಿ ಸಂಕ್ರಾಂತಿಯ ಬಳಿಕ ಹಾಗೂ ಯುಗಾದಿ ಬಳಿಕ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ಬಳಿಕ ವ್ಯಾಪಾರ, ವಾಣಿಜ್ಯ, ಯುಗಾದಿ ಬಳಿಕ ದೇಶದ ಸಮಗ್ರ ಮಳೆ, ಬೆಳೆ, ಜನರು, ರಾಜರು ಇತ್ಯಾದಿಗಳ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಪ್ರಶಸ್ತವಲ್ಲ. ಯುಗಾದಿ ಬಳಿಕ ರಾಜಕೀಯದಲ್ಲಾಗುವ ಬದಲಾವಣೆಗಳ ಕುರಿತು ಭವಿಷ್ಯ ಹೇಳಲು ಸಾಧ್ಯವಾಗುತ್ತದೆ ಎಂದರು.