ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಟ್ಟು ನಿಂತ ಲಿಫ್ಟ್: ಸಂಸದ ಉಮೇಶ್ ಜಾಧವ್ ಸೇರಿದಂತೆ ಮೂವರು ಮುಖಂಡರ ರಕ್ಷಣೆ
Thursday, January 4, 2024
ಬೆಂಗಳೂರು: ನಗರದ ಮಲ್ಲೇಶ್ವರನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಲಿಫ್ಟ್ ಕೈಕೊಟ್ಟ ಪರಿಣಾಮ, ಸಂಸದ ಉಮೇಶ್ ಜಾಧವ್ ಸಹಿತ ಮೂವರು ಬಿಜೆಪಿ ಮುಖಂಡರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಲಿಫ್ಟ್ ನೊಳಗೆ ಸಿಲುಕಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಕೆಟ್ಟು ನಿಂತ ಲಿಫ್ಟ್ ನಲ್ಲೇ ಸಂಸದರು ಸೇರಿದಂತೆ ಮೂರು ಮಂದಿ ಅರ್ಧಗಂಟೆಗೂ ಅಧಿಕಕಾಲ ಸಿಲುಕಿದರು. ಕಚೇರಿ ಸಿಬ್ಬಂದಿ ಲಿಫ್ಟ್ ಸರಿಪಡಿಸಲು ಯತ್ನಿಸಿದರೂ ಅದು ಸಾಧ್ಯವಾಗದೇ, ಹತಾಶೆಗೊಂಡಿದ್ದರು. ಕಚೇರಿಯಲ್ಲಿ ಹಠಾತ್ ವಿದ್ಯುತ್ ಕೈಕೊಟ್ಟ ಹಿನ್ನೆಲೆಯಲ್ಲಿ ಲಿಫ್ಟ್ ಕೆಟ್ಟು ನಿಂತಿತ್ತು ಎನ್ನಲಾಗಿದೆ.
ಮತ್ತೆ ಕರೆಂಟ್ ಬಂದರೂ ಲಿಫ್ಟ್ ಮಾತ್ರ ಕೆಲಸ ಮಾಡಲಿಲ್ಲ. ಆ ಬಳಿಕ ಲಿಫ್ಟ್ ಟೆಕ್ನಿಷಿಯನ್ ಅನ್ನು ಕರೆಸಿ ಲಿಫ್ಟ್ ಸರಿಪಡಿಸಿ ಅಲ್ಲಿ ಸಿಲುಕಿಕೊಂಡ ಮೂವರ ರಕ್ಷಣೆಗೆ ಕಸರತ್ತು ನಡೆಸಲಾಯಿತು. ಕೊನೆಗೆ ಹರಸಾಹಸ ಮಾಡಿ ಲಿಫ್ಟ್ ನ ಬಾಗಿಲನ್ನು ತೆರೆದಾಗ ಲಿಫ್ಟ್ ನಲ್ಲಿ ಸಂಸದ ಉಮೇಶ್ ಜಾಧವ್ ಸಿಲುಕಿಕೊಂಡಿದ್ದರು. ಸುರಕ್ಷಿತವಾಗಿ ಲಿಫ್ಟ್ ನಿಂದ ಹೊರ ಬಂದ ಉಮೇಶ್ ಜಾಧವ್, ಟೆಕ್ನಿಷಿಯನ್ ಕೈಕುಲುಕಿ ಕೃತಜ್ಞತೆ ಸಲ್ಲಿಸಿದರು.