ಮಂಗಳೂರು: ಪತಿಯನ್ನೇ ಕತ್ತು ಹಿಸುಕಿ ಕೊಲೆಗೈದ ಪತ್ನಿ - ಆರೋಪಿತೆ ಸೆರೆ
Sunday, January 14, 2024
ಮಂಗಳೂರು: ಗದಗ ಮೂಲದ ಕೂಲಿ ಕಾರ್ಮಿಕನನ್ನು ಆತನ ಪತ್ನಿಯೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ನಂತೂರು ಬಳಿ ಸಂಭವಿಸಿದೆ.
ಗದಗ ಜಿಲ್ಲೆಯ ಇಟಗಿ ಗ್ರಾಮ ಮೂಲದ ಸದ್ಯ ಮಂಗಳೂರಿನ ನಂತೂರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಪೂಜಾರಿ(39) ಕೊಲೆಯಾದ ಕೂಲಿ ಕಾರ್ಮಿಕ. ಈತನ ಪತ್ನಿ ಗೀತಾ(34) ಕೊಲೆ ಆರೋಪಿತೆ. ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮದ್ಯವ್ಯಸನಿ ಹನುಮಂತಪ್ಪ ಪೂಜಾರಿ ಪ್ರತಿನಿತ್ಯವೂ ಕಂಠಪೂರ್ತಿ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡಿ, ಹೊಡೆಯುತ್ತಿದ್ದ. ಜ.10ರ ರಾತ್ರಿಯೂ ವಿಪರೀತ ಮದ್ಯಸೇವಿಸಿ ಬಂದಿದ್ದ ಹನುಮಂತಪ್ಪ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ಬಳಿಕ ಪತ್ನಿ, ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ. ಆ ಬಳಿಕ ಮತ್ತೆ ಪತಿ - ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪತ್ನಿ ಗೀತಾ, ಹನುಮಂತಪ್ಪನ ಕತ್ತನ್ನು ಅದುಮಿ ಹಿಡಿದು ಬಳಿಕ ಪಂಚೆಯನ್ನು ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾಳೆ.
ಬಳಿಕ ಪೊಲೀಸ್ ದೂರು ದಾಖಲಿಸಿದ್ದ ಗೀತಾ, ತನ್ನೊಂದಿಗೆ ಮಲಗಿದ್ದ ಪತಿ ಹನುಮಂತಪ್ಪ ತಡರಾತ್ರಿ 2 ಗಂಟೆಗೆ ನೋಡುವಾಗ ಪಕ್ಕದಲ್ಲಿ ಇರಲಿಲ್ಲ. ಆದ್ದರಿಂದ ಹೊರಗಡೆ ಹೋಗಿ ನೋಡಿದ್ದೇನೆ. ಆಗ ಆತ ಗೇಟಿನ ಬಳಿ ವಾಂತಿ ಮಾಡಿಕೊಂಡು ಮಾತನಾಡದ ಸ್ಥಿತಿಯಲ್ಲಿದ್ದ. ತಕ್ಷಣ ಅಣ್ಣನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೇನೆ. ಆತ ಬಂದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಆದರೆ ಪತಿ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಪರೀತ ಮದ್ಯಸೇವನೆ ಮಾಡಿ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ದೂರು ದಾಖಲಿಸಿದ್ದಳು.
ಪೊಲೀಸರು ಹನುಮಂತಪ್ಪ ಪೂಜಾರಿಯ ಮೃತದೇಹದ ಮಹಜರು ಮಾಡಿಸಿದ್ದರು. ಆಗ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ಆಗ ಪತ್ನಿ ಗೀತಾಳನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಆಕೆಯೇ ಹನುಮಂತಪ್ಪನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.