ಮಾಜಿ ಮಾಡೆಲ್ ದಿವ್ಯಾ ಪಹುಜಾ ಮರಣೋತ್ತರ ಪರೀಕ್ಷೆ - ಹೊಟೇಲ್ ಮಾಲಕನಿಂದ ನಡೆಯಿತೇ ಕೊಲೆ?
Monday, January 15, 2024
ಹರಿಯಾಣ: ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರನ್ನು ಜನವರಿ 2ರಂದು ಹೋಟೆಲೊಂದರ ಕೊಠಡಿ ಸಂಖ್ಯೆ 111ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಇದೀಗ ದಿವ್ಯಾ ಮರಣೋತ್ತರ ಪರೀಕ್ಷೆಯ ವರದಿಯೂ ಅದನ್ನೇ ರುಜುವಾತು ಮಾಡಿದೆ.
ಹರಿಯಾಣದ ಹಿಸಾರ್‌ನ ಅದ್ರೋಹಾ ಮೆಡಿಕಲ್ ಕಾಲೇಜಿನಲ್ಲಿ ಮೋಹನ್ ಸಿಂಗ್ ಅವರ ನಿರ್ದೇಶನದಂತೆ ಇಬ್ಬರು ಮಹಿಳಾ ವೈದ್ಯರು ಸೇರಿದಂತೆ ನಾಲ್ವರು ವೈದ್ಯರು ದಿವ್ಯಾ ಪಹುಜಾ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವರದಿಯಲ್ಲಿ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ದಿವ್ಯಾ ಪಹುಜಾಗೆ ಗುಂಡು ಹಾರಿಸಲಾಗಿತ್ತು. ಆಕೆಯ ತಲೆಯಿಂದ ಬುಲೆಟ್ ಹೋಗಿರುವುದು ಪತ್ತೆಯಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಕೆಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಟುಂಬದ ಸದಸ್ಯರು ಪಹುಜಾ ಮೃತದೇಹವನ್ನು ಗುರುಗ್ರಾಮಕ್ಕೆ ಕೊಂಡೊಯ್ದಿದ್ದು, ಅಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನಡೆಸಲಿದೆ.
ಜನವರಿ 2ರಂದು 27 ವರ್ಷದ ಮಾಜಿ ಮಾಡೆಲ್ ದಿವ್ಯಾ ಪಹುಜಾರನ್ನು ಗುರುಗ್ರಾಮ್‌ನ ಸಿಟಿ ಪಾಯಿಂಟ್ ಹೋಟೆಲ್‌ನ ಮಾಲಕ ಅಭಿಜಿತ್ ಸಿಂಗ್ (56) ಕೊಲೆ ಮಾಡಿದ್ದಾನೆ. ಕೊಲೆಯಾದ 11 ದಿನಗಳ ಬಳಿಕ ಆಕೆಯ ಮೃತದೇಹ ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೊಹಾನಾದಲ್ಲಿರುವ ಕಾಲುವೆಯಲ್ಲಿ ಪತ್ತೆಯಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಪಹುಜಾ ಕೆಲವು ವೀಡಿಯೊಗಳನ್ನು ಮುಂದಿಟ್ಟು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಆರೋಪಿ ಅಭಿಜಿತ್ ಸಿಂಗ್ ಹೇಳಿಕೊಂಡಿದ್ದಾನೆ. ಆದ್ದರಿಂದ ಆತ ಆಕೆಯ ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ. ಸಿಂಗ್ ಮಾಡಿರುವ ಆರೋಪ, ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು ಅಭಿಜಿತ್ ಸಿಂಗ್, ಹೇಮರಾಜ್, ಓಂ ಪ್ರಕಾಶ್ ಸೇರಿದಂತೆ ಐವರನ್ನು ಸದ್ಯ ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.