ಎದುರುಮನೆ ಕಿಟಕಿ ಮೂಲಕ ಇಣುಕಿದ ವ್ಯಕ್ತಿ- ಅಟ್ಟಾಡಿಸಿ ಹತ್ಯೆ
ಹಾಸನ: ರಾತ್ರಿ ವೇಳೆ ಎದುರುಮನೆ ಕಿಟಕಿ ಮೂಲಕ ಇಣುಕಿ ನೋಡಿದ ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ ಮಾಡಿದ ಘಟನೆ
ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಎಲೆಗೌಡನಹಳ್ಳಿಯಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ.
ಜಯರಾಂ (55) ಮೃತಪಟ್ಟಿರುವ ವ್ಯಕ್ತಿ. ಜ. 21ರ ತಡರಾತ್ರಿ ಜಯರಾಂ ಪತ್ನಿ ಪ್ರಮೀಳಾ ಅವರ ತಂದೆ ತಮ್ಮೇಗೌಡ ಮೈಸೂರಿನ ಸಾಲಿಗ್ರಾಮ ತಾಲೂಕು ಕೆಸವತ್ತೂರು ಕೊಪ್ಪಲು ಗ್ರಾಮದಲ್ಲಿ ತೀರಿಕೊಂಡಿದ್ದರಿಂದ ಮನೆಮಂದಿ ಎಲ್ಲರೂ ಅಲ್ಲಿಗೆ ಹೋಗಿದ್ದರು. ಮೃತರ ಅಂತ್ಯಕ್ರಿಯೆ ಮರುದಿನ ನಿಗದಿಯಾಗಿದ್ದರಿಂದ, ಜಯರಾಂ ಅವರು ಮನೆಯಲ್ಲಿ ಸಾಕಿದ್ದ ಜಾನುವಾರು ನೋಡಿಕೊಳ್ಳಲು ಗ್ರಾಮಕ್ಕೆ ತೆರಳಿ ರಾತ್ರಿ ವಾಪಸ್ ಬಂದು, ಮನೆಯಲ್ಲಿ ಮಲಗಿದ್ದರು.
ರಾತ್ರಿ 11 ಗಂಟೆ ಸಮಯದಲ್ಲಿ ಜಯರಾಂ ಮೂತ್ರ ವಿಸರ್ಜನೆ ಮಾಡಲು ಹೊರಗೆ ಬಂದಿದ್ದರು. ಈ ವೇಳೆ ಎದುರುಗಡೆಯ ಮಧು ಅವರ ಮನೆಯ ಕಿಟಕಿ ಮೂಲಕ ಇಣುಕಿ ನೋಡಿದ್ದಾರೆ. ಇದನ್ನು ಗಮನಿಸಿದ ಮಧು ಮತ್ತು ಸಂಬಂಧಿಕರು ಜಯರಾಂ ಅವರನ್ನು ಅಟ್ಟಾಡಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ.
ಅಷ್ಟರಲ್ಲಿ ಗ್ರಾಮಸ್ಥರು ಬಂದು ಜಗಳ ಬಿಡಿಸಿದ್ದಾರೆ. ಅನಂತರ ಗಾಯಾಳುವನ್ನು ಮನೆಯಲ್ಲಿ ಮಲಗಿಸಿದ್ದು, ಬೆಳಗಾಗುವುದರೊಳಗಾಗಿ ಜಯರಾಂ ಮೃತಪಟ್ಟಿದ್ದರು. ಮೃತರ ಮಗಳು ನೀಡಿದ ದೂರು ಆಧರಿಸಿ ಹಳ್ಳಿ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.