ಕ್ಷುಲ್ಲಕ ಕಾರಣಕ್ಕೆ ತಾಯಿ - ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ
Thursday, January 25, 2024
ಮೈಸೂರು: ಮನೆಮಗನೇ ಕ್ಷುಲ್ಲಕ ಕಾರಣಕ್ಕೆ ಹೆತ್ತತಾಯಿ ಹಾಗೂ ಸಹೋದರಿಯನ್ನು ಕರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಲ್ಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಪುತ್ರಿ ಧನುಶ್ರೀ(19) ಮೃತಪಟ್ಟವರು. ಆರೋಪಿ ನಿತಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೇರೆ ಸಮುದಾಯದ ಯುವಕನನ್ನು ತಂಗಿ ಪ್ರೀತಿಸಿದ್ದರಿಂದ ದ್ವೇಷ ಬೆಳೆಸಿಕೊಂಡಿದ್ದ ಅಣ್ಣ ನಿತಿನ್ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಮೊದಲು ಸಹೋದರಿಯನ್ನು ಕೆರೆಗೆ ತಳ್ಳಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಬಂದ ತಾಯಿಯನ್ನೂ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ.
ಸಹೋದರಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸುತಿದ್ದ ವಿಚಾರದಲ್ಲಿ ಸಹೋದರ - ಸಹೋದರಿ ನಡುವೆ ವೈಮನಸ್ಸು ಬೆಳೆದಿತ್ತು. ನಿನ್ನೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ನೆಪವೊಡ್ಡಿ ತಾಯಿ ಹಾಗೂ ತಂಗಿಯನ್ನು ನಿತಿನ್ ಬೈಕ್ ನಲ್ಲಿ ಕರೆದೊಯ್ದಿದ್ದಾನೆ. ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಈ ವೇಳೆ ಪುತ್ರಿಯನ್ನು ರಕ್ಷಿಸಲು ಬಂದ ತಾಯಿಯನ್ನೂ ಕೆರೆಗೆ ತಳ್ಳಿದ್ದಾನೆ. ಆ ಬಳಿಕ ತಾಯಿಯನ್ನು ರಕ್ಷಿಸಲು ನಿತಿನ್ ಕರೆಗೆ ಹಾರಿದ್ದಾನೆ. ಆದರೆ ಅಷ್ಟರಲ್ಲಾಗಲೇ ತಾಯಿ ಮಗಳಿಬ್ಬರೂ ಸಾವನ್ನಪ್ಪಿದ್ದಾರೆ.
ತಕ್ಷಣ ಮನೆಗೆ ಹಿಂದಿರುಗಿದ ಆರೋಪಿ ನಿತಿನ್ ತನ್ನ ತಂದೆ ಸತೀಶ್ ಅವರ ಬಳಿ ನಡೆದ ಘಟನೆಯನ್ನು ತಿಳಿಸಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.