-->
ಮದ್ಯಸೇವನೆಗೆ ಹಣ ನೀಡಿಲ್ಲವೆಂದು ಪುತ್ರನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆ

ಮದ್ಯಸೇವನೆಗೆ ಹಣ ನೀಡಿಲ್ಲವೆಂದು ಪುತ್ರನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆ


ಬೆಂಗಳೂರು: ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಪಾಪಿ ತಂದೆಯೋರ್ವನು ಪುತ್ರನನ್ನೇ ಗುಂಡು ಹಾರಿಸಿ ಕೊಲೆಗೈದ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್‌ ನಿವಾಸಿ ಸುರೇಶ್ ಎಂಬಾತ ತನ್ನ ಪುತ್ರ ನರ್ತನ್ ಬೋಪಣ್ಣ (32)ರನ್ನು ಕೊಲೆಗೈದ ಆರೋಪಿ.

ನರ್ತನ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸುರೇಶ್‌ ವಿಪರೀತ ಮದ್ಯವ್ಯಸನಿ. ಇದೇ ಕಾರಣದಿಂದ ಆತ ತನ್ನ ಪುತ್ರನನ್ನೇ ಕೊಲೆ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ನರ್ತನ್ ಬೋಪಣ್ಣ ಕರೇಕಲ್‌ನ ಮನೆಯಲ್ಲಿ ತಂದೆ ಸುರೇಶ್ ಮತ್ತು ತಾಯಿ ಜತೆ ವಾಸವಾಗಿದ್ದರು. 

ಗುರುವಾರ ಸಂಜೆ ಸುರೇಶ್ ಪುತ್ರನಲ್ಲಿ ಮದ್ಯಪಾನಕ್ಕೆ ಹಣ ಕೇಳಿ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ನರ್ತನ್ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದಾನೆ. ಕೋಣೆಯ ಒಳಗಿನಿಂದಲೇ ಬೆದರಿಕೆ ಹಾಕುತ್ತಿದ್ದ ಸುರೇಶ್ ಸಿಟ್ಟಿಗೆದ್ದ ತನ್ನ ಬಳಿಯಿದ್ದ ಲೈಸೆನ್ಸ್‌ ಹೊಂದಿದ ಸಿಂಗಲ್ ಬ್ಯಾರಲ್ ಗನ್ ನಿಂದ ಗುಂಡು ಹೊಡೆದು ಸಾಯಿಸಿದ್ದಾನೆ.

 ಕೋಣೆಯ ಬಾಗಿಲು ಹಾಕಿದ್ದರಿಂದ ಅದನ್ನು ಒಡೆಯಲೆಂದು ಬಾಗಿಲಿಗೆ ಗುಂಡು ಹಾರಿಸಿದ್ದಾನೆ. ಹೀಗೆ ಹಾರಿಸಿದ ಗುಂಡು ಬಾಗಿಲನ್ನು ಒಡೆದುದಲ್ಲದೆ ನೇರವಾಗಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣರ ತೊಡೆಯ ಮೇಲ್ಬಾಗಕ್ಕೆ ಹೊಕ್ಕಿದೆ ಎನ್ನಲಾಗಿದೆ.

ಹೀಗೆ ಗುಂಡು ಕಾಲು ಹೊಕ್ಕುತ್ತಿದ್ದಂತೆಯೇ ನರ್ತನ್ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾನೆ. ಸಹೋದರಿ ಸಂಬಂಧಿಕರೊಬ್ಬರನ್ನು ಮನೆಗೆ ಹೋಗುವಂತೆ ಹೇಳಿದ್ದರು. ಆದರೆ, ಅವರೆಲ್ಲಾ ಬಂದು ನೋಡಿದಾಗ ಸುಮಾರು ಮೂರು ಗಂಟೆ ಆಗಿತ್ತು. ಅಷ್ಟು ಹೊತ್ತಿಗೆ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡಿದ್ದ ನರ್ತನ್ ಏಳುವ ಸ್ಥಿತಿಯಲ್ಲೇ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನರ್ತನ್ ಸಾವನ್ನಪ್ಪಿದ್ದಾರೆ.

ಮೂರು ಗಂಟೆ ನೆತ್ತರ ಮಡುವಿನಲ್ಲೇ ಬಿದ್ದಿದ್ದ ನರ್ತನ್ ರನ್ನು  ನೋಡುತ್ತಾ ತಾಯಿ ಹಾಸಿಗೆಯಲ್ಲೇ ಅಸಹಾಯಕರಾಗಿ ಮಲಗಿದ್ದರು. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article