"ಅಕ್ಕ ಅಕ್ಕ..." ಎನ್ನುತ್ತಲೇ ಶಿಕ್ಷಕಿಯ ಕೊಲೆಗೈದು ಹೆಣ ಹೂತುಹಾಕಿ ಪರಾರಿಯಾದ ಯುವಕ
Wednesday, January 24, 2024
ಮಂಡ್ಯ: ಇಲ್ಲಿನ ಎಸ್‌ಇಟಿ ಶಾಲೆಯ ಶಿಕ್ಷಕಿ ದೀಪಿಕಾ(28) ಎಂಬಾಕೆಯ ಹತ್ಯೆ ಮಾಡಿ ಬೆಟ್ಟದ ತಪ್ಪಲಲ್ಲಿ ಮೃತದೇಹ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಶಿಕ್ಷಕಿಯ ಊರಿನ ಯುವಕನಿಂದಲೇ ಶಿಕ್ಷಕಿ ಕೊಲೆಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ದೀಪಿಕಾರನ್ನು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಲಾಗಿದೆ. ಅದೇ ಗ್ರಾಮದ ಪರಿಚಿತ ಯುವಕ ನಿತೇಶ್ ಕುಮಾರ್(22) ಕೊಲೆ ಆರೋಪಿ ಎಂದು ಅನುಮಾನ ವ್ಯಕ್ತವಾಗಿದೆ. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಿಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.
ಜನವರಿ 20ರಂದು ಕಾಣೆಯಾಗಿದ್ದ ಮಾಣಿಕ್ಯ ಗ್ರಾಮದ ಲೋಕೇಶ್ ಅವರ ಪತ್ನಿ ದೀಪಿಕಾ ಕುರಿತು ಮೇಲುಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯೋಗಾನರಸಿಂಹ ಸ್ವಾಮಿ ಬೆಟ್ಟದ ಮೇಲೆ ಪ್ರವಾಸಿಗರೊಬ್ಬರು ರೀಲ್ಸ್ ಮಾಡುವಾಗ ಬೆಟ್ಟದ ಹಿಂಭಾಗ ವ್ಯಕ್ತಿಯೊಬ್ಬ ಕೊಲೆ ಮಾಡುವುದನ್ನು ಕಂಡು 13 ಸೆಕೆಂಡ್ ವಿಡಿಯೋ ಚಿತ್ರೀಕರಿಸಿ ಠಾಣೆಗೆ ಬಂದು ನೀಡಿದ್ದಾರೆ. ಇದಾದ ಬಳಿಕ ಬೆಟ್ಟದ ಹಿಂಭಾಗ ಪೊಲೀಸರು ಸುತ್ತಮುತ್ತ ಹುಡುಕಾಟ ಮಾಡಿದಾಗ ಸ್ಕೂಟರ್ ಒಂದು ಸಿಕ್ಕಿದೆ. ಆ ಬಳಿಕ ಹುಡುಕಾಟ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಎರಡು ದಿನಗಳ ಬಳಿಕ ಆ ಸ್ಥಳದಲ್ಲಿ ದುರ್ವಾಸನೆ ಬರುತ್ತಿದ್ದ ಸ್ಥಳದಲ್ಲಿ ಗುಂಡಿ ತೆಗೆದು ನೋಡಿದಾಗ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿದೆ. ಪೋಷಕರು ಕೂಡ ಆ ಮೃತದೇಹ ದೀಪಿಕಾಳದ್ದೇ ಎಂದು ಗುರುತಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ನಿತೇಶ್ ಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಿತೀಶ್ ಕುಮಾರ್ ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳೊಂದಿಗೆ ಸ್ನೇಹ ಬೆಳೆಸಿದ್ದಾನೆ. ಒಂದೇ ಊರಿನವನಾದ್ದರಿಂದ ದೀಪಿಕಾ ಆತನೊಂದಿಗೆ ಸಲುಗೆಯಿಂದಲೇ ಮಾತನಾಡುತ್ತಿದ್ದಳು. ಆದರೆ ಇದೀಗ ಈಕೆಯ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಇದೀಗ ಸ್ವಗ್ರಾಮದ ಯುವಕನ ವಿರುದ್ಧ ಮೃತ ದೀಪಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ದೀಪಿಕಾ ನಾಪತ್ತೆಗೂ ಮುನ್ನ ನಿತೀಶ್ ಕೊನೆಯ ಕರೆ ಮಾಡಿದ್ದಾನೆ. ದೀಪಿಕಾ ಮೃತದೇಹ ಸಿಗುತ್ತಿದ್ದಂತೆ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ.