ತೃತೀಯ ಲಿಂಗಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಪತ್ನಿ!
ಹೈದರಾಬಾದ್: ತೃತೀಯ ಲಿಂಗಿಯಾಗಿ ಬದಲಾಗಿದ್ದ ಗಂಡನನ್ನು ಸುಪಾರಿ ಹಂತಕರ ಮೂಲಕ ಹತ್ಯೆ ಮಾಡಿಸಿದ್ದ ಪತ್ನಿಯನ್ನು ತೆಲಂಗಾಣದ ಸಿದ್ದಿಪೇಟ್ ಪೊಲೀಸರು ರವಿವಾರ ಬಂಧಿಸಿದ್ದಾರೆ.
2014 ರಲ್ಲಿ ಮದುವೆಯಾಗಿದ್ದ ಆರೋಪಿತ ಮಹಿಳೆಗೆ ಒಂದು ಮಗು ಇದೆ. ಈ ನಡುವೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದ ಪತಿಯು ತೃತೀಯ ಲಿಂಗಿಯಾಗಿ ಬದಲಾಗಿದ್ದ. ಮನೆ ಬಿಟ್ಟು ಹೋಗಿದ್ದ ಪತಿಯನ್ನು ಜೀವನಾಂಶ ನೀಡುವಂತೆ ಪತ್ನಿ ಒತ್ತಾಯಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ತೃತೀಯ ಲಿಂಗಿ ಗಂಡ, ಮಹಿಳೆ ಕೆಲಸ ಮಾಡುತ್ತಿದ್ದ ಶಾಲೆಗೆ ತೆರಳಿ ನಿತ್ಯವೂ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿದಿನ ಕಿರಿಕಿರಿ ಮಾಡುತ್ತಿದ್ದ ಪತಿಯ ಹತ್ಯೆಗೆ ಸಂಚು ರೂಪಿಸಿದ ಪತ್ನಿ, ಗಂಡನನ್ನು ಕೊಲ್ಲಲು ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ 18 ಲಕ್ಷ ರೂ.ಗೆ ಡೀಲ್ ನೀಡಿದ್ದರು. 4.6 ಲಕ್ಷ ರೂ. ಹಣ ಪಡೆದುಕೊಂಡಿದ್ದ ಇಬ್ಬರು ಹಂತಕರು ಕಳೆದ ವರ್ಷ ಡಿ.11 ರಂದು ಆರೋಪಿತ ಮಹಿಳೆಯ ಗಂಡನನ್ನು ಕೊಂದು ಪರಾರಿಯಾಗಿದ್ದರು. ಅನುಮಾನದ ಮೇಲೆ ಮಹಿಳೆಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಯ ಸತ್ಯ ಬೆಳಕಿಗೆ ಬಂದಿದೆ.