ಅಪ್ರಾಪ್ತೆಯ ಅತ್ಯಾಚಾರ ನೇಪಾಳ ಕ್ರಿಕೆಟಿಗನಿಗೆ ಎಂಟು ವರ್ಷ ಜೈಲು ಶಿಕ್ಷೆ
Thursday, January 11, 2024
ನವದೆಹಲಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನೇಪಾಳದ ದೇಶದ ಕ್ರಿಕೆಟಿಗ ಸಂದೀಪ್ ಲಮಿಛಾನೆಗೆ ಅಲ್ಲಿನ ನ್ಯಾಯಾಲಯವೊಂದು ಎಂಟು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ನೇಪಾಳದ ಕಂಡು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಿಶಿರ್ ರಾಜ್ ಢಾಕ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ ಆರೋಪಿ ಸಂದೀಪ್ ಲಮಿಛಾನೆ ಮೇಲಿನ ಆರೋಪ ಸಾಬೀತಾಗಿದೆ ಎಂದು ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ ಸಂದೀಪ್ ಲಮಿಛಾನೆಗೆ ಮೂರು ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 2 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
23 ವರ್ಷದ ಲಮಿಛಾನೆಯನ್ನು ಡಿಸೆಂಬರ್ ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸಿತ್ತು. ನೇಪಾಳ ತಂಡದ ಮಾಜಿ ನಾಯಕರಾಗಿರುವ ಲಮಿಛಾನೆ ಕಂಡುವಿನ ಹೊಟೇಲೊಂದರಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ, ಅವರಿಗೆ ಕಳೆದ ವರ್ಷದ ಜನವರಿಯಲ್ಲಿ ಜಾಮೀನು ನೀಡಲಾಗಿತ್ತು. ಬಳಿಕ ತಂಡಕ್ಕೆ ಮರಳಿದ ಅವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.