ಚಲಿಸುತ್ತಿದ್ದ ಬಸ್ ನಡಿಗೆ ಹಾರಿ ಪ್ರಾಣಬಿಟ್ಟ ಯುವಕ
Wednesday, January 10, 2024
ವಿಜಯಪುರ: ಚಲಿಸುತ್ತಿದ್ದ ಬಸ್ನಡಿಗೆ ಹಾರಿ ಹಿಂಬದಿ ಚಕ್ರದಡಿಗೆ ತಲೆಕೊಟ್ಟು ಯುವಕನೋರ್ವನು ಪ್ರಾಣಬಿಟ್ಟಿರುವ ದುರ್ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮೃತಪಟ್ಟ ಯುವಕ ಹಾಸನ ಮೂಲದವನು ಎಂದು ತಿಳಿದು ಬಂದಿದೆ. ಈತ ಆತ್ಮಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯಾವಳಿ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಸ್ತೆಬದಿ ಫೋನ್ ನಲ್ಲಿ ಮಾತನಾಡುತ್ತ ನಿಂತಿದ್ದ ಯುವಕ ಬಸ್ ಬರುತ್ತಿದ್ದಂತೆ ಏಕಾಏಕಿ ತನ್ನ ಕೈಯಲ್ಲಿದ್ದ ಮೊಬೈಲ್ ಎಸೆದು ಹಿಂಬದಿ ಚಕ್ರದಡಿಗೆ ಹಾರಿದ್ದಾನೆ. ಈ ವೇಳೆ ಈತನ ತಲೆಯ ಮೇಲೆಯೇ ಬಸ್ ನ ಹಿಂಬದಿ ಚಕ್ರ ಹರಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಯುವಕ ಹಿಂದಿನ ಚಕ್ರಕ್ಕೆ ತಲೆ ಕೊಟ್ಟಿದ್ಧಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸ್ಥಳದಲ್ಲಿ ಯುವಕನ ಮೊಬೈಲ್ ಪತ್ತೆಯಾಗಿದ್ದು, ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಠಾಣೆ ಪೊಲೀಸರು ಮೃತ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.