ಮಂಗಳೂರು: ಸಿಎ ವ್ಯಾಸಂಗ ಮಾಡುತ್ತಾ, ಮ್ಯೂಚ್ವಲ್ ಫಂಡ್ ವ್ಯವಹಾರ ಮಾಡುತ್ತಿದ್ದ ಯುವಕ ನೇಣಿಗೆ ಶರಣು
Tuesday, January 23, 2024
ಮಂಗಳೂರು: ಸಿಎ ವ್ಯಾಸಂಗ ಮಾಡುತ್ತಾ, ಮ್ಯೂಚ್ವಲ್ ಫಂಡ್ ವ್ಯವಹಾರ ನಡೆಸುತ್ತಿದ್ದ ಯುವಕನೋರ್ವನು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ನಡೆದಿದೆ.
ಕರಂಗಲ್ಪಾಡಿ ನಿವಾಸಿ ಕಾರ್ಲ್ ಲಾರೆನ್ಸ್ ಅರಾನ್ (23) ಮೃತಪಟ್ಟ ಯುವಕ.
ಸೋಮವಾರ ಷೇರ್ ಮಾರ್ಕೆಟ್ ರಜೆ ಇದ್ದ ಪರಿಣಾಮ ಕಾರ್ಲ್ ಲಾರೆನ್ಸ್ ಅರಾನ್ ಮನೆಯಲ್ಲಿಯೇ ಇದ್ದ. ಮಧ್ಯಾಹ್ನ ಊಟವಾದ ಬಳಿಕ ತಮ್ಮ ರೂಂಗೆ ಹೋದ ಕಾರ್ಲ್ ಲಾರೆನ್ಸ್ ಸಂಜೆ 4ಗಂಟೆಯಾದರೂ ಎದ್ದಿರಲಿಲ್ಲ. ಮನೆಯವರು ಆತನನ್ನು ಕರೆದರೂ ಸ್ಪಂದಿಸಿರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ರಾತ್ರಿ 7 ಗಂಟೆಯಾದರೂ ಕೋಣೆಯಿಂದ ಹೊರ ಬಂದಿರದ ಹಿನ್ನೆಲೆಯಲ್ಲಿ ಮನೆಯವರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಆಗಮಿಸಿ ರಾತ್ರಿ ಬಾಗಿಲು ಒಡೆದು ನೋಡಿದಾಗ, ಕಾರ್ಲ್ ಲಾರೆನ್ಸ್ ಬೆಡ್ ಶೀಟನ್ನು ಕಿಟಕಿಗೆ ಕಟ್ಟಿ ಕತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಲಾರೆನ್ಸ್ ತನ್ನ ತಂದೆಯೊಂದಿಗೆ ಸೇರಿಕೊಂಡು ಮ್ಯೂಚುವಲ್ ಫಂಡ್ ಸೇರಿದಂತೆ ಷೇರು ಮಾರ್ಕೆಟ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಡೆತ್ ನೋಟ್ ಸಿಕ್ಕಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.