ಕಟೀಲು ಮೇಳದ ಯಕ್ಷಗಾನ ಮಕರಸಂಕ್ರಾಂತಿ ಬಳಿಕ ರಾತ್ರಿ ಪೂರ್ತಿ ಇರಲಿದೆ: ಕಾಲಮಿತಿಗೆ ಬೀಳಲಿದೆ ಬ್ರೇಕ್
Tuesday, January 9, 2024
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಜನವರಿ 14ರ ಸಂಕ್ರಮಣದ ಬಳಿಕದಿಂದ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡಲಿದೆ. ಹೈಕೋರ್ಟ್ ಸೂಚನೆಯನ್ವಯ ಹಾಗೂ ಕಟೀಲು ಮೇಳದ ಯಕ್ಷಗಾನ ಪ್ರಿಯರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಕಮಿಟಿ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿಯವರು ತಿಳಿಸಿದ್ದಾರೆ.
ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ಕಟೀಲು ಮೇಳವು 2020ರಲ್ಲಿ ಕೊರೊನಾ ಬಳಿಕ ಕಾಲಮಿತಿಯ ಪ್ರದರ್ಶನ ನೀಡಲು ಆರಂಭಿಸಿತ್ತು. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಧ್ವನಿವರ್ಧಕ ನಿಷೇಧ ಕುರಿತು ರಾಜ್ಯದಲ್ಲಿ ಅಭಿಯಾನ ನಡೆದಿತ್ತು. ನಸುಕಿನ ವೇಳೆಗೆ ಮಸೀದಿಯಲ್ಲಿ ಆಜಾನ್ ನಿಷೇಧಿಸಬೇಕು ಎಂದು ಒತ್ತಾಯಿಸಿ ರಾತ್ರಿ ವೇಳೆ ಧ್ವನಿವರ್ಧಕ ಬಳಸಬಾರದೆಂದು ಕೂಗು ಎಬ್ಬಿಸಲಾಗಿತ್ತು. ಇದು ರಾತ್ರಿ ವೇಳೆ ನಡೆಯುತ್ತಿದ್ದ ಯಕ್ಷಗಾನಕ್ಕೆ ನೇರ ಪರಿಣಾಮ ಬಿದ್ದಿತ್ತು. ಆದ್ದರಿಂದ ರಾತ್ರಿ ವೇಳೆ ಧ್ವನಿವರ್ಧಕ ನಿಷೇಧದ ಹೆಸರಲ್ಲಿ ಕಟೀಲು ಮೇಳಗಳು ಕಾಲಮಿತಿಯ ಪ್ರದರ್ಶನ ನಡೆಸಲು ಪ್ರಾರಂಭಿಸಿತು.
ಇದೀಗ ಕೊರೊನಾ ಕಡಿಮೆಯಾಗಿದ್ದರೂ, ಸಂಜೆ 6ರಿಂದ ರಾತ್ರಿ 12ರವರೆಗಿನ ಕಾಲಮಿತಿಯ ಯಕ್ಷಗಾನ ಮಾತ್ರ ಹಾಗೆಯೇ ಮುಂದುವರಿದಿದೆ. ಕಾಲಮಿತಿಗೆ ಪ್ರೇಕ್ಷಕರು ಹೆಚ್ಚು ಬರುತ್ತಾರೆ ಎಂಬ ಉದ್ದೇಶವೂ ಇದರ ಹಿಂದಿದೆ. ಇದು ಹಗಲಿನಲ್ಲಿ ಕೆಲಸಕ್ಕೆ ಹೋಗುವು ಕಲಾವಿದರಿಗೂ ಅನುಕೂಲವೇ ಆಗಿತ್ತು.
ಆದರೆ ಕಾಲಮಿತಿಯಿಂದ ಯಕ್ಷಗಾನ ಪರಂಪರೆಗೆ ಹೊಡೆತ ಬೀಳುತ್ತಿದೆ. ಯಕ್ಷಗಾನ ಅದರ ಪರಂಪರೆಯಲ್ಲಿಯೇ ಇರಬೇಕು ಎನ್ನುವ ವಾದ ಮುಂದಿಟ್ಟು ಕಟೀಲಿನ ಭಕ್ತರ ಒಂದು ತಂಡ ರಾತ್ರಿಪೂರ್ತಿ ಯಕ್ಷಗಾನ ಬೇಕೆಂದು ಹೈಕೋರ್ಟ್ ಕದ ತಟ್ಟಿತ್ತು. ವಾದವಿವಾದವನ್ನು ಆಲಿಸಿದ ಕೋರ್ಟ್ ರಾತ್ರಿಪೂರ್ತಿ ಯಕ್ಷಗಾನ ನಡೆಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಅದನ್ನು ದೇವಸ್ಥಾನದ ಆಡಳಿತವೇ ತೀರ್ಮಾನಸಬೇಕು ಎಂದಿತ್ತು. ಕೋರ್ಟ್ ಸೂಚನೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಂದಿಟ್ಟು ಕಾಲಮಿತಿಯ ಯಕ್ಷಗಾನಕ್ಕೆ ಬ್ರೇಕ್ ಕೊಡಬೇಕೆಂಬ ಒತ್ತಾಯ ಮುಂದಿಡಲಾಗಿತ್ತು.
ಕಟೀಲು ದೇವಸ್ಥಾನದ ಆಡಳಿತ ಕಮಿಟಿಯ ಆಸ್ರಣ್ಣರಿಗೆ ಮತ್ತು ಕಟೀಲು ಮೇಳಗಳ ಕಲಾವಿದರಲ್ಲಿ ಎಲ್ಲರಿಗೂ ಸಮ್ಮತಿಯಿಲ್ಲದ್ದರೂ, ಸದ್ಯ ಪೂರ್ಣರಾತ್ರಿ ಯಕ್ಷಗಾನ ನಡೆಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. 2022-23ನೇ ಸಾಲಿನ ಕಟೀಲಿನ ಆರು ಮೇಳಗಳ ಪೂರ್ತಿ ಯಕ್ಷಗಾನ ತಿರುಗಾಟ ಕಾಲಮಿತಿಯಲ್ಲೇ ನಡೆದಿತ್ತು. ಈ ಸಾಲಿನಲ್ಲಿ ಡಿಸೆಂಬರ್ 8ರಿಂದ ತೊಡಗಿ ಜನವರಿ 13ರವರೆಗಿನ ಯಕ್ಷಗಾನ ಕಾಲಮಿತಿಯಲ್ಲೇ ನಡೆಯುತ್ತದೆ. ಆದರೆ, ಇದೇ ಸಂಕ್ರಾಂತಿ ಬಳಿಕ ಕಟೀಲು ಮೇಳಗಳ ಆಟಗಳು ರಾತ್ರಿಯಿಂದ ಬೆಳಗ್ಗಿನವರೆಗೂ ಇರಲಿದೆ.