ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರು ಅಂದರ್ - 1.66 ಲಕ್ಷ ಮೌಲ್ಯದ ಮಾದಕದ್ರವ್ಯ ವಶಕ್ಕೆ
Tuesday, February 6, 2024
ಮಂಗಳೂರು: ಬಲ್ಮಠ ನ್ಯೂ ರೋಡ್ ನ ಬಳಿ ಮಾದಕದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 1.66 ಲಕ್ಷ ರೂ. ಮೌಲ್ಯದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಅತ್ತಾವರದ ವೈದ್ಯನಾಥ ನಗರದ ಚಿರಶ್ರೀ ಅಪಾರ್ಟ್ ಮೆಂಟ್ ನಿವಾಸಿ ಆದಿತ್ಯ ಕೆ.(29) ಮತ್ತು ಅಡ್ಯಾರ್ ಪದವು ಲೋಬೊ ನಗರ ಕೋರ್ದಬ್ಬು ದೈವಸ್ಥಾನದ ಬಳಿ ನಿವಾಸಿ ರೋಹನ್ ಸಿಕ್ವೇರ(33) ಬಂಧಿತ ಆರೋಪಿಗಳು.
ಫೆ.4ರಂದು ರಾತ್ರಿ 9ಗಂಟೆಗೆ ಬಲ್ಮಠ ನ್ಯೂ ರೋಡ್ ನಲ್ಲಿರುವ ಕೆಎಂಸಿ ಆಸ್ಪತ್ರೆಯ ವಿಸಿಟರ್ಸ್ ವಾಹನ ಪಾರ್ಕಿಂಗ್ ಬಳಿ ರಸ್ತೆ ಬದಿಯಲ್ಲಿ ಆರೋಪಿಗಳು ಮಾದಕದ್ರವ್ಯವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಬಂಧಿತರಿಂದ 50,000 ರೂ. ಮೌಲ್ಯದ 27 ಗ್ರಾಂ ಹೈಡೋವೀಡ್ ಗಾಂಜಾ, 1,00,000 ರೂ. ಮೌಲ್ಯದ 2.95 ಕೆಜಿ ಗಾಂಜಾ, 8000 ರೂ. ಮೌಲ್ಯದ ಗಾಂಜಾ ಆ್ಯಷ್ ಆಯಿಲ್, 16,800 ರೂ. ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಡಿಜಿಟಲ್ ತೂಕ ಮಾಪನಗಳು 2, ಕೃತ್ಯಕ್ಕೆ ಬಳಸಿದ 90,000 ರೂ. ಮೌಲ್ಯದ ಎರಡು ಮೊಬೈಲ್ ಪೋನ್ ಗಳು ಮತ್ತು 20 ಲಕ್ಷ ಮೌಲ್ಯದ ಹುಂಡೈ ಕಾರು ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.