25ಲಕ್ಷಕ್ಕಾಗಿ ನಟಿ ತ್ರಿಷಾ ರಾಜಕಾರಣಿಯೊಂದಿಗೆ ಮಲಗಿದ್ದಾರೆ ಎಂದ ರಾಜಕಾರಣಿ- ಸೌತ್ ಬ್ಯೂಟಿಯ ತಿರುಗೇಟು ಹೇಗಿತ್ತು ಗೊತ್ತಾ?
Wednesday, February 21, 2024
ಚೆನ್ನೈ: ಬಹುಭಾಷ ನಟಿ ತ್ರಿಷಾ ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ. ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್‌ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಇತ್ತೀಚೆಗೆ ಅವರ ನಟನೆಯ ಪೊನ್ನಿಯನ್ ಸೆಲ್ವನ್ ಮತ್ತು ಲಿಯೋ ಸಿನಿಮಾ ಬಹಳ ಯಶಸ್ಸು ಕಂಡಿದೆ. ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. 40 ವರ್ಷವಾದ್ರೂ ಅವರು ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿರೊಂದಿಗೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು.
ಕೆಲ ತಿಂಗಳ ಹಿಂದಷ್ಟೇ ನಟ ಮನ್ಸೂರ್ ಅಲಿ ಖಾನ್ ತ್ರಿಷಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಲಿಯೋ ಚಿತ್ರದಲ್ಲಿ ತ್ರಿಷಾರನ್ನು ರೇಪ್ ಮಾಡುವ ಸೀನ್ ಇರಬೇಕಿತ್ತು ಎನ್ನುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿ ಕೊನೆಗೆ ಕ್ಷಮೆಯಾಚಿಸಿದರು. ಇದೀಗ ತಮಿಳುನಾಡಿನ ರಾಜಕಾರಣಿಯೊಬ್ಬ ತ್ರಿಷಾ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಇದು ತಮಿಳುನಾಡಿನಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ.
ತಮಿಳುನಾಡು ರಾಜಕಾರಣಿ ಎ.ವಿ. ರಾಜು ಅವರು ತ್ರಿಷಾ ವಿರುದ್ಧ ಕೀಳಾಗಿ ಮಾತನಾಡಿದ್ದಾರೆ. ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ಜಿ. ವೆಂಕಟಾಚಲಂ ಅವರನ್ನು ಟೀಕಿಸುವ ಭರದಲ್ಲಿ ಎ.ವಿ. ರಾಜು ಅವರು, ಹಣಕ್ಕಾಗಿ ರಾಜಕಾರಣಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸಿದ್ಧರಾಗಿರುವ ನಾಯಕಿಯರ ಅಕ್ರಮಗಳ ಬಗ್ಗೆ ಮಾತನಾಡಿದರು. ಕಟುವಾದ ವಾಗ್ದಾಳಿ ಮಾಡುತ್ತಲೇ ತ್ರಿಷಾ ವಿಚಾರವನ್ನು ಪ್ರಸ್ತಾಪ ಮಾಡಿದ ರಾಜು, ತ್ರಿಷಾ 25 ಲಕ್ಷ ರೂಪಾಯಿಗಾಗಿ ರಾಜಕಾರಣಿಯ ಜತೆ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ರಾಜು ಕಾಮೆಂಟ್ ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದಾರೆ. ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದು ಎಂದಿದ್ದಾರೆ. ಇನ್ನೂ ಕೆಲವರು ಈ ವಿಷಯದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡದಿದ್ದಕ್ಕಾಗಿ ನಟಿ ತ್ರಿಷಾ ಅವರನ್ನೂ ಟೀಕಿಸಿದ್ದಾರೆ.
ರಾಜಕಾರಣಿ ರಾಜು ಹೇಳಿಕೆಗೆ ಕೊನೆಗೂ ಪ್ರತಿಕ್ರಿಯೆ ನೀಡಿರುವ ತ್ರಿಷಾ, ಎಲ್ಲರ ಗಮನ ಸೆಳೆಯಲು ಯಾವುದೇ ಮಟ್ಟಕ್ಕೆ ಇಳಿಯುವ ಕೀಳು ಜೀವನ ಮತ್ತು ತಿರಸ್ಕಾರದ ಮನುಷ್ಯರನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಖಚಿತವಾಗಿ ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಮುಂದೆ ಏನು ಹೇಳಬೇಕು ಮತ್ತು ಏನು ಮಾಡಬೇಕು ಎಲ್ಲವನ್ನು ನನ್ನ ಕಾನೂನು ವಿಭಾಗ ನೋಡಿಕೊಳ್ಳುತ್ತದೆ ಎಂದು ತ್ರಿಷಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.