8,150 ಕಿ.ಮೀ. ದೂರ ನಡೆದು ಮೆಕ್ಕಾ ತಲುಪಿದ ಉಪ್ಪಿನಂಗಡಿಯ ಯುವಕ
Saturday, February 3, 2024
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದಿಂದ ಕಳೆದ 2023ರ ಜ.30ರಂದು ಮೆಕ್ಕಾಗೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದ ಅಬ್ದುಲ್ ಖಲೀಲ್ ಸೋಮವಾರ ಮೆಕ್ಕಾ ತಲುಪಿದ್ದಾರೆ. ಈ ಮೂಲಕ ತಮ್ಮ ಸುದೀರ್ಘಾವಧಿಯ ಕಾಲ್ನಡಿಗೆ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಬ್ದುಲ್ ಮೆಕ್ಕಾ ಕಾಲ್ನಡಿಗೆ ಯಾತ್ರೆಯನ್ನು ಸಂಪೂರ್ಣಗೊಳಿಸಲು ಒಂದು ವರ್ಷ ಎರಡು ದಿನಗಳ ಸಮಯ ತೆಗೆದುಕೊಂಡಿದ್ದಾರೆ. ಈ ಮೂಲಕ ಅವರು ಬರೋಬ್ಬರಿ 8150 ಕಿ.ಮೀ. ದೂರವನ್ನು ನಡಿಗೆಯ ಮೂಲಕ ಕ್ರಮಿಸಿದ್ದಾರೆ. ಈ ಯಾತ್ರೆಯ ವೇಳೆ ಅವರು ಭಾರತ, ಪಾಕಿಸ್ತಾನ, ಓಮನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ದಾಟಿದ್ದಾರೆ. ಪಾಕಿಸ್ತಾನದಲ್ಲಿ ಮಾತ್ರ ಅವರ ಕಾಲ್ನಡಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಘಾ ಗಡಿಯ ಮೂಲಕ ಪಾಕ್ ಪ್ರವೇಶಿಸಿದ ಬಳಿಕ ವಿಮಾನದಲ್ಲಿ ಒಮಾನ್ ದೇಶವನ್ನು ಪ್ರವೇಶಿಸಿ ಅಲ್ಲಿಂದ ಕಾಲ್ನಡಿಗೆ ಮುಂದುವರೆಸಿದ್ದಾರೆ.
ಉಳಿದೆಲ್ಲಾ ದೇಶಗಳಲ್ಲಿಯೂ ಅವರಿಗೆ ಅಲ್ಲಿನ ಆಡಳಿತ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್, ಸುದೀರ್ಘ ಪ್ರಯಾಣದ ನನ್ನ ಯಾತ್ರೆ ಗುರಿ ತಲುಪಿದಾಗ ಭಾವಪರವಶನಾಗಿದ್ದೆ. ನನ್ನ ಈ ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ. ಹುಟ್ಟು ಭಾರತೀಯನಾದ ನಾನು ಭಾರತೀಯ ಜೀವನ ಪರಂಪರೆಯಲ್ಲಿ ಕಾಣಸಿಗುವ ಕಾಲ್ನಡಿಗೆ ಯಾತ್ರೆಯ ಬಗ್ಗೆ ಆಸಕ್ತನಾಗಿದ್ದೆ. ಅದಕ್ಕಾಗಿ ಇಷ್ಟು ದೂರದ ಯಾತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದೆ ಎಂದರು.