ಮಂಗಳೂರು: ಲಾರಿ ಹರಿದು ಏಳನೇ ತರಗತಿ ಬಾಲಕಿ ದಾರುಣ ಸಾವು - ತಂದೆ ಪಾರು
Wednesday, February 7, 2024
ಮಂಗಳೂರು: ತಂದೆಯೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆಯೇ ಲಾರಿಯೊಂದು ಹರಿದು ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್ ಬಳಿಯ ಮುಕ್ಕ ಹೆದ್ದಾರಿಯಲ್ಲಿ ನಡೆದಿದೆ.
ಮುಕ್ಕ ಮಿತ್ರಪಟ್ಟದ ನಿವಾಸಿ ಮಾನ್ವಿ (12) ಮೃತಪಟ್ಟ ಬಾಲಕಿ.
ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಈ ಲಾರಿ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟರ್ ತಾಗಿ ರಸ್ತೆಬದಿ ನಡೆದು ಹೋಗುತ್ತಿದ್ದ ಬಾಲಕಿ ಮಾನ್ವಿ ಹಾಗೂ ಆಕೆಯ ತಂದೆ ಯಶು ಕುಮಾರ್ ರಸ್ತೆಗೆ ಬಿದ್ದಿದ್ದಾರೆ. ಆಗ ಲಾರಿ ಬಾಲಕಿಯ ಮೇಲೆಯೇ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಆಕೆಯ ತಂದೆ ಇನ್ನೊಂದು ಬದಿಗೆ ಬಿದ್ದಿದ್ದರಿಂದ ಬಚಾವಾಗಿದ್ದಾರೆ. ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಮಾನ್ವಿ ಎನ್‌ಐಟಿಕೆ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಶಾಲೆ ಬಿಟ್ಟು ತಂದೆಯೊಂದಿಗೆ ಮನೆಯ ಕಡೆಗೆ ನಡೆದುಕೊಂಡು ಬರುತ್ತಿದ್ದಳು. ಈ ವೇಳೆ ಅಪಘಾತ ನಡೆದಿದೆ. ತಕ್ಷಣ ಸ್ಥಳೀಯರು ಸೇರಿ ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ಲಾರಿ ಚಾಲಕ ಮದ್ಯದ ಮತ್ತಿನಲ್ಲಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ಸ್ಥಳೀಯರು ಜಟಾಪಟಿ ನಡೆಸಿದ್ದಾರೆ.