ಚಿಕಾಗೋ: ಭಾರತೀಯ ಮೂಲದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಮೇಲೆ ಡಕಾಯಿತರಿಂದ ದಾಳಿ
Wednesday, February 7, 2024
ಚಿಕಾಗೊ: ಅಮೇರಿಕಾದ ಚಿಕಾಗೋ ನಗರದಲ್ಲಿ ನಾಲ್ವರು ಡಕಾಯಿತರು ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿರುವುದು ವರದಿಯಾಗಿದೆ. ಘಟನೆಯಲ್ಲಿ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾನೆ.
ಹೈದರಾಬಾದ್ ನ ಲಂಗರ್ ಹೌಝ್ ಪ್ರದೇಶ ಮೂಲದ ಸೈಯ್ಯದ್ ಮಝಹಿರ್ ಅಲಿ ಗಾಯಾಳು ವಿದ್ಯಾರ್ಥಿ. ಈತ ಅಮೆರಿಕದ ಇಂಡಿಯಾನಾ ವೆಸ್ಲಿಯನ್ ವಿವಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿದ್ಯಾರ್ಥಿ ಹಂಚಿಕೊಂಡಿದ್ದಾನೆ. ಈ ವೀಡಿಯೊದಲ್ಲಿ ದರೋಡೆಕೋರರ ದಾಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡುಬರುತ್ತಿದೆ. ಅಮೆರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಸರಣಿ ದಾಳಿ ನಡೆಯುತ್ತಿರುವ ಘಟನೆಗಳ ನಡುವೆಯೇ ಇಂಥ ಮತ್ತೊಂದು ಘಟನೆ ವರದಿಯಾಗಿದೆ.
ಸೈಯ್ಯದ್ ಮಝಹಿರ್ ಅಲಿ ಆಹಾರದ ಪೊಟ್ಟಣ ಹಿಡಿದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ನಾಲ್ವರು ಡಕಾಯಿತರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಕ್ಯಾಂಪ್ ಬೆಲ್ ಅವೆನ್ಯೂ ಎಂಬಲ್ಲಿ ಅವರ ನಿವಾಸದ ಬಳಿ, ಮೂವರು ಓಡಿಸಿಕೊಂಡು ಬಂದು ದಾಳಿ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬರುತ್ತಿದೆ.
ಏನೋ ಅನಾಹುತವಾಗುತ್ತಿದೆ ಎಂದು ತಿಳಿದು ತಪ್ಪಿಸಿಕೊಳ್ಳಲು ಅಲಿ ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಓಡಿ ಬರುತ್ತಿದ್ದಾಗ ಮನೆಯ ಬಳಿ ಜಾರಿ ಬಿದ್ದ ಸಂದರ್ಭ ವಿದ್ಯಾರ್ಥಿಯನ್ನು ಒದೆದು, ಗುದ್ದಿದರು ಎಂದು ದೃಶ್ಯಾವಳಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡ ಅವರು ವಿವರಿಸಿದ್ದಾರೆ.