ಮಂಗಳೂರು: ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ ಆರು ಮಂದಿ ಮೇಲೆ ಪ್ರಕರಣ ದಾಖಲು
Thursday, February 15, 2024
ಮಂಗಳೂರು: ನಗರದ ವೆಲೆನ್ಸಿಯಾ ಬಳಿಯ ಜೆರೋಸಾ ಶಾಲೆಯ ಮುಂಭಾಗ ಪ್ರತಿಭಟನೆಗೆ ಕುಮ್ಮಕ್ಕು, ಕ್ರೈಸ್ತ ಧರ್ಮದ ನಿಂದನೆ ಸೇರಿದಂತೆ ವಿವಿಧ ಆರೋಪದ ಹಿನ್ನೆಲೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ ಆರು ಮಂದಿ ಮೇಲೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ಕಾರ್ಪೊರೇಟರ್ ಗಳಾದ ಸಂದೀಪ್ ಗರೋಡಿ, ಭರತ್ ಕುಮಾರ್ ಸೇರಿದಂತೆ ಮತ್ತೋರ್ವನ ಮೇಲೆ ಪ್ರಕರಣ ದಾಖಲಾಗಿದೆ.
ಅನಿಲ್ ಜೆರಾಲ್ಡ್ ಲೋಬೊ ಎಂಬವರು ನೀಡಿರುವ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ. ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಯಾವುದೇ ಧರ್ಮಕ್ಕೆ ಅವಮಾನ ಮಾಡದಿದ್ದರೂ, ಈ ಬಗ್ಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸದೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್, ಸ್ಥಳೀಯ ಕಾರ್ಪೋರೇಟರ್ ಗಳಾದ ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ಸೇರಿದಂತೆ ಮತ್ತೋರ್ವನು ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿ, ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತನಾಡಿ, ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿರುತ್ತಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಹಿಂದೂ, ಕ್ರಿಶ್ಚಿಯನ್ ಸಮುದಾಯಗಳ ನಡುವೆ ಗಲಭೆ ಉಂಟಾಗುವಂತೆ ಪ್ರಚೋದಿಸಿದ್ದಾರೆ. ಜೊತೆಗೆ ಜಿಲ್ಲೆಯ ಕೋಮುಸೂಕ್ಷ್ಮತೆಗೆ ಭಂಗ ತರಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.