ಮಂಗಳೂರು: ಅಂತರಾಷ್ಟ್ರೀಯ ಗಾಳಿಪಟ ಉತ್ಸವ- ತಣ್ಣೀರುಬಾವಿ ಬೀಚ್ ನಲ್ಲಿ ದೇಶ ವಿದೇಶಗಳ ಗಾಳಿಪಟದ ರಂಗು
Sunday, February 11, 2024
ಮಂಗಳೂರು: ಎತ್ತ ನೋಡಿದರೂ ಬಾನೆತ್ತರಕ್ಕೆ ರಂಗುರಂಗಾದ ಗಾಳಿಪಟಗಳ ಹಾರಾಟ. ದೇಶವಿದೇಶಗಳ ವೈವಿಧ್ಯಮಯ ಸಣ್ಣ ಗಾತ್ರದಿಂದ ತೊಡಗಿ ಬೃಹತ್ ಗಾತ್ರದ ಗಾಳಿಪಟಗಳದ್ದೇ ಕಾರುಬಾರು. ಎಲ್ಲರನ್ನೂ ತನ್ನತ್ತ ಆಕರ್ಷಿಸುವ ಮೈಮಾಟ ಹೊಂದಿದ ಗಾಳಿಪಟಗಳು ಇಲ್ಲಿ ಹಾರುತ್ತಿತ್ತು.
ಹೌದು... ಈ ದೃಶ್ಯ ಕಂಡು ಬಂದದ್ದು ಟೀಮ್ ಮಂಗಳೂರು ಆಶ್ರಯದಲ್ಲಿ ನಗರದ ತಣ್ಣೀರುಬಾವಿ ಬೀಚ್ ನಲ್ಲಿ ನಡೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ. ಇಲ್ಲಿ ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ಅಪರಾಹ್ನ 3ರಿಂದ ಸಂಜೆ 7ರವರೆಗೆ ಗಾಳಿಪಟ ಹಾರಾಟ ಹಾಗೂ ಪ್ರದರ್ಶನ ನಡೆಯುತ್ತಿದೆ. ರಾತ್ರಿ ವೇಳೆ ವಿದ್ಯುತ್ ದೀಪಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯದಡು ಸಾಮರಸ್ಯ, ಐಕ್ಯ ಭಾವಗಳಿಂದ ಗಾಳಿಪಟ ಉತ್ಸವ ನಡೆಸಲಾಗುತ್ತಿದೆ. ಈ ಗಾಳಿಪಟ ಉತ್ಸವದಲ್ಲಿ ಸಾವಿರಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಹಾರಾಡುತ್ತಿದೆ. ಎಂಆರ್ ಪಿಎಲ್- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ಈ ಬಾರಿ ನಡೆದಿದೆ.
ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳಾದ ಕಥಕ್ಕಳಿ, ಯಕ್ಷಗಾನ, ಭೂತಕೋಲಗಳ ಸೇರಿದಂತೆ ದೇಶ-ವಿದೇಶಗಳ ಆಧುನಿಕ ಶೈಲಿಯ ವಿವಿಧ ವಿನ್ಯಾಸದ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ, ಹುಲಿ, ಬಟರ್ ಪ್ಲೈ ಟ್ರೈನ್, ಏರೋಪ್ಲೇನ್ ಹಾರಾಡುತ್ತಿತ್ತು.
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಥೈಯಾಂಡ್‌ನ ಪಲವಾನ್ ಸುಕನ್‌ಲಯ, ಗ್ರೀಸ್‌ನ ಕೊನ್‌ಸ್ಟಂಟಿನ್ ರಾಟ್‌ಸ್, ಎಸ್ಟೋನಿಯಾದ ಆ್ಯಂಡ್ರಿಸ್ ಸೊಕ್, ಲಿಯಾ ರಿಡಲಿ, ಸ್ವೀಡನ್ ಆ್ಯಂಡ್ರೆಸ್ ಅಗ್ರೆನ್, ಇಂಡೋನೇಶ್ಯಾದ ಸರಿ ಸಬ್ಬಾ ಭಕ್ತಿ ಮದ್‌ಝಿದ್, ಟಿಂಟಾನ್ ಪ್ರಿಯಾಂಗೊರೊ, ವೆನಾಸ್ ಒಂಗೊವಿನೊಟೊ, ಮಲೇಶ್ಯಾದ ಮುಹಮ್ಮದ್ ಫಸ್ಟೀಲ್ ಬಿನ್ ಅಲಿ, ವಾನ್ ಅಹ್ಮದ್ ಅಳ್ಳವಿ ಬಿನ್ ವನ್ ಹುಸೇನ್ ಅವರನ್ನೊಳಗೊಂಡ ತಂಡಗಳು ಭಾಗವಹಿಸಿದೆ.
ಎರಡು ದಿನಗಳ ನಡೆಯುವ ಈ ಗಾಳಿಪಟ ಉತ್ಸವದಲ್ಲಿ ಮಲೇಷಿಯಾ, ಇಂಡೋನೇಷ್ಯಾ, ಗ್ರೀಸ್, ಸ್ವೀಡನ್, ಉಕ್ರೇನ್, ಥೈಲ್ಯಾಂಡ್, ವಿಯೇಟ್ನಾಂ, ಇಸ್ಟೋನಿಯ ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿವಹಿಸಿದ್ದಾರೆ. ಸದಾ ಕಡಲ ರುದ್ರನರ್ತನ ಕಾಣಲು ಬರುತ್ತಿದ್ದ ಜನತೆ ಬಹಳ ವರ್ಷಗಳ ಬಳಿಕ ನಡೆಯುತ್ತಿರುವ ಗಾಳಿಪಟ ಉತ್ಸವಕ್ಕೆ ಬಂದು ಗಾಳಿಪಟಗಳ ಹಾರಾಟವನ್ನು ಕಂಡು ಮನಸೋತರು. ಕೆಲವರು ಅಲ್ಲಿಯೇ ಮಾರಾಟ ಮಾಡುತ್ತಿದ್ದ ಗಾಳಿಪಟಗಳನ್ನು ಖರೀದಿಸಿ ಹಾರಿಸಿ ಖುಷಿಪಟ್ಟರು.