ಪತಿಯನ್ನು ತೊರೆದು ಆತನ ಸ್ನೇಹಿತನೊಂದಿಗೆ ಸಂಸಾರ: ಮಾಜಿ ಹೆಂಡತಿ, ಆಕೆಯ ಪ್ರಿಯಕರನನ್ನು ಕೊಚ್ಚಿ ಕೊಂದ ಪಾಪಿ ಪತಿ
Thursday, February 1, 2024
ಬೆಳಗಾವಿ: ತನ್ನ ಸ್ನೇಹಿತನೊಂದಿಗೆ ಓಡಿಹೋಗಿದ್ದ ಕೋಪಕ್ಕೆ ಪತಿಯೊಬ್ಬ ತನ್ನ ಮಾಜಿ ಪತ್ನಿ ಮತ್ತು ಆಕೆಯ ಎರಡನೇ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೊಕಟ್ಟೂರು ಗ್ರಾಮದ ಯೆಲ್ಲಮ್ಮವಾಡಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಥಣಿ ಪಟ್ಟಣದ ಕೊಕಟ್ಟೂರು ಗ್ರಾಮದ ನಿವಾಸಿಗಳಾದ ಯಾಸಿನ್ ಬಾಗೋಡಿ(21) ಮತ್ತು ಹೀನಾ ಕೌಸರ್ (19) ಕೊಲೆಯಾದ ಜೋಡಿ. ಕೊಕಟ್ಟೂರು ಗ್ರಾಮದ ತೌಫಿಕ್ ಖ್ಯಾದಿ ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಹೀನಾ ಕೌಸರ್ ಮತ್ತು ಕೊಲೆ ಆರೋಪಿ ತೌಫಿಕ್ ಖ್ಯಾದಿಗೆ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ, ಹೀನಾ ಕೌಸರ್ ಗೆ ಪತಿ ತೌಫಿಕ್ ಸ್ನೇಹಿತ ಅದೇ ಗ್ರಾಮದ ಯಾಸಿನ್ ಬಾಗೋಡಿಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಆತನೊಂದಿಗೆ ಓಡಿಹೋಗಿದ್ದಳು. ಆದ್ದರಿಂದ ತೌಫಿಕ್, ತನ್ನ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದನು. ಆ ಬಳಿಕ ಹೀನಾ ಮತ್ತು ಯಾಸಿನ್ ಡಿಸೆಂಬರ್ 2023 ರಲ್ಲಿ ವಿವಾಹವಾಗಿ ಜ.29ರಂದು ಗ್ರಾಮಕ್ಕೆ ಮರಳಿದ್ದರು.
ತನ್ನನ್ನು ತೊರೆದು ತನ್ನ ಸ್ನೇಹಿತನೊಂದಿಗೆ ಹೊಸ ಜೀವನ ಆರಂಭಿಸಲು ತೊಡಗಿರುವ ಮಾಜಿ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಆರೋಪಿ ತೌಫಿಕ್ ನಿರ್ಧರಿಸಿದ್ದಾನೆ. ಜ.30ರಂದು ಹೀನಾ ಮತ್ತು ಯಾಸಿನ್ ಮೇಲೆ ಹರಿತವಾದ ಕುಡುಗೋಲಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ವೇಳೆ ತೌಫಿಕ್ ನನ್ನು ತಡೆಯಲು ಯತ್ನಿಸಿದ ಅಮೀನ್ ಬಾಗೋಡಿ ಮತ್ತು ಮುಶಿಫ್ ಮುಲ್ಲಾ ಅವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.