ಸಾಲ ತೀರಿಸಲು ವಿಮಾ ಹಣಕ್ಕಾಗಿ ಹೆತ್ತತಾಯಿಯನ್ನೇ ಹತ್ಯೆ ಮಾಡಿ ಮೃತದೇಹ ಹೂತಿಟ್ಟ ಪುತ್ರ
Sunday, February 25, 2024
ಫತೇಹ್ ಪುರ: ಆನ್ ಲೈನ್ ಗೇಮ್ ಗೀಳು ಹತ್ತಿಸಿಕೊಂಡಿದ್ದ ಯುವಕನೋರ್ವನು ಜೀವ ವಿಮಾ ನಿಗಮದ ದುಡ್ಡಿಗಾಗಿ ಹೆತ್ತತಾಯಿಯನ್ನೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಫತೇಹ್ ಪುರದಲ್ಲಿ ನಡೆದಿದೆ.
ಹಿಮಾಂಶು ಎಂಬಾತ 50 ಲಕ್ಷ ರೂ. ಹಣಕ್ಕಾಗಿ ತನ್ನ ತಾಯಿಯನ್ನೇ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಯಮುನಾ ನದಿ ತೀರದಲ್ಲಿ ಹೂತಿಟ್ಟ ಆರೋಪಿ.
ಆರೋಪಿ ಹಿಮಾಂಶು ಜನಪ್ರಿಯ ಪ್ಲಾಟ್‌ಫಾರ್ಮ್ ಝುಪಿಯಲ್ಲಿ ಆನ್ ಲೈನ್ ಗೇಮಿಂಗ್ ಗೆ ಚಟ ಹೊಂದಿದ್ದ. ಈ ವ್ಯಸನದಿಂದ ಆತ ಭಾರೀ ನಷ್ಟ ಅನುಭವಿಸಿದ್ದ. ಪರಿಣಾಮ ಆತ ಸುಮಾರು 4 ಲಕ್ಷದಷ್ಟು ಸಾಲ ಮಾಡಿದ್ದ. ಸಾಲಗಾರರಿಗೆ ಹಣವನ್ನು ಮರು ಪಾವತಿ ಮಾಡಲು ಆತ ಹೆತ್ತತಾಯಿಯನ್ನೇ ನಿರ್ದಯವಾಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದಿದ್ದ. ಅಲ್ಲದೆ ತನ್ನ ಹೆತ್ತವರಿಗೆ ತಲಾ 50 ಲಕ್ಷ ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಹಣವನ್ನು ಬಳಸಿದ್ದ. ಇದಾದ ಕೆಲವೇ ದಿನಗಳಲ್ಲಿ ಆತ ತಂದೆ ಇಲ್ಲದಿದ್ದಾಗ ತಾಯಿ ಪ್ರಭಾರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಅದನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಕೊಂಡೊಯ್ದಿದ್ದ.
ಚಿತ್ರಕೂಟ ದೇವಸ್ಥಾನಕ್ಕೆ ತೆರಳಿದ್ದ ಹಿಮಾಂಶುವಿನ ತಂದೆ ರೋಷನ್ ಸಿಂಗ್ ಹಿಂತಿರುಗಿ ಬಂದಾಗ ಮನೆಯಲ್ಲಿ ಪತ್ನಿ ಮತ್ತು ಮಗ ಕಾಣಲಿಲ್ಲ. ಅವನು ಸುತ್ತಮುತ್ತ ಕೇಳಿದ್ದ. ಆಗ ಅಕ್ಕಪಕ್ಕದವರು ಹಿಮಾಂಶು ಟ್ರ್ಯಾಕ್ಟರ್ ನಲ್ಲಿ ನದಿಯ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ತನ್ನ ಸಾಲ ತೀರಿಸಲು ಆತ ಈ ಕೃತ್ಯ ನಡೆಸಿದ್ದ ಎಂದು ಬಾಯ್ಬಿಟ್ಟಿದ್ದಾನೆ.