ಉಡುಗೊರೆಯಾಗಿ ದೊರೆತ ಮೀನು ಸೇವಿಸಿ ವ್ಯಕ್ತಿ ಸಾವು: ಪಪ್ಫರ್ ಮೀನು ಬಗ್ಗೆ ಕೇಳಿದ್ರೆ ಶಾಕ್ ಆಗೋದು ಖಂಡಿತಾ
Sunday, February 4, 2024
ಬ್ರಾಸಿಲಿಯಾ: ಉಡುಗೊರೆಯಾಗಿ ದೊರೆತ ಪಪ್ಫರ್ ಮೀನು ಸೇವಿಸಿದ ಕೇವಲ 35 ದಿನಗಳೊಳಗೆ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.
ಬ್ರೆಜಿಲ್‌ನ ಎಸ್ಪಿರಿಟೊ ಸಾಂಟಾ ಪ್ರಾಂತ್ಯದ ಅರಾಕ್ರೂಜ್ ನಿವಾಸಿ ಮ್ಯಾಗ್ನೆ ಸೆರ್ಗಿಯೊ ಗೋಮ್ಸ್ (46) ಮೃತ ವ್ಯಕ್ತಿ. ಜಪಾನ್‌ನ ಸಮುದ್ರದಲ್ಲಿ ಕಂಡುಬರುವ ಈ ಮೀನು ಅಲ್ಲಿನ ಅತ್ಯಂತ ಜನಪ್ರಿಯ ಆಹಾರವಾಗಿದೆ. ಈ ಮೀನನ್ನು ಸೆರ್ಗಿಯೋ ಉಡುಗೊರೆಯಾಗಿ ಪಡೆದಿದ್ದ.
ಮ್ಯಾಗೋ ಸೆರ್ಗಿಯೋ ಹಾಗೂ ಆತನ ಸ್ನೇಹಿತ ಉಡುಗೊರೆಯಾಗಿ ಪಡೆದ ಈ ಮೀನನ್ನು ಅಡುಗೆ ಮಾಡಿ, ಸೇವಿಸಿದ್ದಾರೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಮ್ಯಾಗೋ ಸೆರ್ಗಿಯೋ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಗೆ ಜಾರಿದ್ದಾನೆ. ಆ ಬಳಿಕ 35 ದಿನಗಳವರೆಗೆ ಕೋಮಾದಲ್ಲಿದ್ದ ಮ್ಯಾಗೋ ಸೆರ್ಗಿಯೋ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮ್ಯಾಗೋ ಸೆರ್ಗಿಯೋನೊಂದಿಗೆ ಮೀನು ತಿಂದಿದ್ದ ಆತನ ಸ್ನೇಹಿತನ ಸ್ಥಿತಿಯೂ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಂದಹಾಗೆ ಈ ಪಪ್ಫರ್ ಮೀನು ಬಹಳ ವಿಷಕಾರಿ ಮೀನು. ಈ ಮೀನು ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಯಕೃತ್ತಿನಲ್ಲಿ ಶಕ್ತಿಯುತವಾದ ವಿಷವನ್ನು ಉತ್ಪಾದಿಸುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ ಎನ್ನಲಾಗುತ್ತದೆ.
ಕೆಲವು ತರಬೇತಿ ಪಡೆದ ಜಪಾನಿನ ಬಾಣಸಿಗರಿಗೆ ಮಾತ್ರ ಈ ಮೀನನ್ನು ವಿಷವಸ್ತುವಿನಿಂದ ಬೇರ್ಪಡಿಸಿ ಸೂಕ್ಷ್ಮವಾಗಿ ಬೇಯಿಸುವುದು ಹೇಗೆ ಎಂದು ತಿಳಿದಿದೆ ಎಂಬುದು ಗಮನಾರ್ಹ ಸಂಗತಿ. ಅಲ್ಲದೆ, ಈ ಮೀನು ಅಡುಗೆ ಮಾಡಲು ಲೈಸೆನ್ಸ್ ಸಹ ಪಡೆಯಬೇಕಿದೆ. ಈ ಮೀನು ಖಾದ್ಯ ತಿಂದು ಪ್ರತಿ ವರ್ಷ ನೂರಾರು ಜಪಾನಿಗರು ಸಾಯುತ್ತಾರೆ.